ಬೆಂಗಳೂರು: ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಚಿತ್ರನಟ ಕಿಚ್ಚಸುದೀಪ್ ಹೇಳಿರುವುದು ಸರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸುದೀಪ್ ಅವರ ಮಾತಿನಲ್ಲಿ ತಪ್ಪು ಹುಡುಕುವಂಥದ್ದು ಏನೂ ಇಲ್ಲ. ನಟ ಅಜಯ್ ದೇವಗನ್ ಅಧಿಕ ಪ್ರಸಂಗತನ ಮೆರೆದಿದ್ದಾರೆ ಅದು ಸರಿಯಲ್ಲ ಎಂದು ಟ್ವೀಟ್ ಮಾಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶ ಭಾಷೆಗಳಲ್ಲಿ ಹಿಂದಿಯೂ ಒಂದು. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಮರಾಠಿಯಂತೆ ಅದೂ ಒಂದು ಭಾಷೆ ಅಷ್ಟೇ.
ಭಾರತ ಬಹು ಭಾಷೆಗಳ ತೋಟ. ಬಹು ಧರ್ಮ, ಬಹು ಭಾಷೆ, ಬಹು ಸಂಸ್ಕೃತಿಗಳ ಬೀಡು. ಇದನ್ನು ಕದಡುವುದು ಎಂದು ಹೇಳಿದ್ದಾರೆ.
ಹೆಚ್ಚು ಜನ ಮಾತನಾಡುತ್ತಾರೆ ಎಂದ ಮಾತ್ರಕ್ಕೆ ಹಿಂದಿ ಎಲ್ಲರ ಭಾಷೆಯಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೇವಲ 9ಕ್ಕಿಂತ ಕಡಿಮೆ ರಾಜ್ಯಗಳಲ್ಲಿ ಹಿಂದಿ 2ನೇ ಭಾಷೆ, ಇಲ್ಲವೇ 3ನೇ ಭಾಷೆ.
ಹಾಗಾಗಿ ಅಜಯ್ ದೇವಗನ್ ಮಾತುಗಳು ಎಷ್ಟು ಸರಿ. ಹಿಂದಿ ಭಾಷೆಗೆ ನಮ್ಮ ಚಿತ್ರಗಳನ್ನು ಡಬ್ ಮಾಡಬೇಡಿ ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.
ಮೊದಲಿನಿಂದಲೂ ಕೇಂದ್ರದಲ್ಲಿ ಆಡಳಿತ ನಡೆಸಿದ ರಾಜಕೀಯ ಪಕ್ಷಗಳು ಪ್ರಾದೇಶಿಕ ಭಾಷೆಗಳನ್ನು ಹೊಸಕಿ ಹಾಕುವ ದುಷ್ಟ ಪ್ರಯತ್ನ ಮಾಡುತ್ತಿವೆ.
ಕಾಂಗ್ರೆಸ್ ಆರಂಭ ಮಾಡಿದ ಅನ್ಯಭಾಷೆಗಳ ಹತ್ತಿಕ್ಕುವ ಕೃತ್ಯಗಳನ್ನು ಈಗ ಬಿಜೆಪಿ ಅತಿಯಾಗಿ ಮುಂದುವರಿಸುತ್ತಿದೆ ಎಂದು ಎಚ್ ಡಿ ಕೆ ದೂರಿದ್ದಾರೆ.
ಒಂದೇ ಪಕ್ಷ, ಒಂದೇ ತೆರಿಗೆ, ಒಂದೇ ಭಾಷೆ, ಒಂದೇ ಸರ್ಕಾರ ಎನ್ನುವ ಸರ್ವಾಧಿಕಾರಿ ಮನಃಸ್ಥಿತಿಯ ಬಿಜೆಪಿ ಮತ್ತು ಅದರ ಹಿಂದಿ ರಾಷ್ಟ್ರೀಯವಾದದ ಮುಖವಾಣಿ ರೀತಿಯಲ್ಲಿ ದೇವಗನ್ ಬಡಬಡಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಕನ್ನಡ ಚಿತ್ರರಂಗವು ಈಗ ಹಿಂದಿ ಚಿತ್ರರಂಗವನ್ನು ಮೀರಿ ಬೆಳೆಯುತ್ತಿದೆ. ಕನ್ನಡಿಗರು ಪ್ರೋತ್ಸಾಹಿಸಿದ ಪರಿಣಾಮ ಹಿಂದಿ ಚಿತ್ರರಂಗ ಬೆಳೆದಿದೆ, ಫೂಲ್ ಔರ್ ಕಾಂಟೆ ಸಿನಿಮಾ ಬೆಂಗಳೂರಿನಲ್ಲಿ ಒಂದು ವರ್ಷ ಪ್ರದರ್ಶನ ಕಂಡಿದ್ದನ್ನು ದೇವಗನ್ ಮರೆಯಬಾರದು ಎಂದು ತಿಳಿಸಿದ್ದಾರೆ.

