ಬೆಂಗಳೂರು: ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ಪಕ್ಷದ ಪ್ರಮುಖರ ಜೊತೆ ನಡೆಸಬೇಕಾದ ಮಹತ್ವದ ಸಭೆಯನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಿರುವುದು ಕುತೂಹಲವನ್ನು ಕೆರಳಿಸಿದೆ.
ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಖಾಸಗಿ ಹೋಟೆಲ್‍ನಲ್ಲಿ ಕೋರ್ ಕಮಿಟಿ ಸದಸ್ಯರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ಪ್ರಮುಖರು, ಸಚಿವರು ಸೇರಿದಂತೆ ಒಟ್ಟು 60 ಪ್ರಮುಖರ ಜೊತೆ ಅಮಿತ್ ಷಾ ಸಭೆ ನಿಗದಿಯಾಗಿತ್ತು.
ಆದರೆ ಪಕ್ಷದ ಪ್ರಮುಖರ ಜೊತೆ ನಿಗದಿಯಾಗಿದ್ದ ಚರ್ಚೆಯನ್ನು ಅಮಿತ್ ಷಾ ಅವರು ದಿಢೀರನೆ ರದ್ದುಪಡಿಸುವ ಮೂಲಕ ಆಶ್ಚರ್ಯ ಹುಟ್ಟಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವದ ಅಳಿವು-ಉಳಿವಿನ ಪ್ರಶ್ನೆ ಎಂದೇ ಹೇಳಲಾಗಿದ್ದ ಈ ಸಭೆಯಲ್ಲಿ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.
ಪದೇ ಪದೇ ಕೇಳಿಬರುತ್ತಿರುವ ನಾಯಕತ್ವ ಬದಲಾವಣೆ ಬಗ್ಗೆ ಅಮಿತ್ ಷಾ ಸ್ಪಷ್ಟ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಲಿದ್ದಾರೆ ಎಂಬ ಮಾತು ಬಿಜೆಪಿ ಪಾಳಯದಲ್ಲಿ ಕೇಳಿಬಂದಿತ್ತು.
ಸಿಎಂ ಬೊಮ್ಮಾಯಿ ಮುಂದುವರಿಕೆ ಇಲ್ಲವೇ ಬದಲಾವಣೆ, ಖಾಲಿ ಇರುವ ಐದು ಸ್ಥಾನಗಳ ಭರ್ತಿ ಇಲ್ಲವೇ ಕೆಲವು ಸಚಿವರಿಗೆ ಕೋಕ್ ನೀಡಿ ಸಂಪುಟ ಪುನಾರಚನೆ ಮಾಡುವುದು, ವಿಶೇಷವಾಗಿ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ಕುರಿತು ಚರ್ಚೆ ನಡೆಯಬೇಕಿತ್ತು.
ಆದರೆ ಸಭೆ ದಿಢೀರ್ ರದ್ದಾಗಿರುವುದು ಬಿಜೆಪಿಯಲ್ಲೇ ಅಚ್ಚರಿ ಮೂಡಿಸಿದೆ.

