ಅನುಮತಿ ಪಡೆಯದೇ ಧ್ವನಿವರ್ಧಕ ಅಳವಡಿಸಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವು

ಬೆಂಗಳೂರು: ಅನುಮತಿ ಪಡೆಯದೇ ಧ್ವನಿವರ್ಧಕ ಅಳವಡಿಸಿರುವ ಧಾರ್ಮಿಕ ಕೇಂದ್ರಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ಸರ್ಕಾರ ನೋಟಿಸ್ ನೀಡಲು ನಿರ್ಧರಿಸಿದೆ.

ರಾಜಧಾನಿ ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಕೋಲಾರ, ಮಂಗಳೂರು, ಬೆಳಗಾವಿ, ಕಲಬುರಗಿ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧೆಡೆ 121 ದೇವಾಲಯಗಳು, 83 ಮಸೀದಿಗಳು, 22 ಚರ್ಚ್‍ಗಳು, 59 ಬಾರ್‍ಗಳು, 12 ಕೈಗಾರಿಕಾ ಪ್ರದೇಶಗಳು ಸೇರಿದಂತೆ ಒಟ್ಟು 301 ಸ್ಥಳಗಳಿಗೆ ನೋಟಿಸ್ ನೀಡಲು ಗೃಹ ಇಲಾಖೆ ಸಿದ್ದತೆ ನಡೆಸಿದೆ.

ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಅನಧಿಕೃತವಾಗಿ ಅಳವಡಿಸಿರುವ ಧ್ವನಿವರ್ಧಕಗಳನ್ನು 15 ದಿನದೊಳಗೆ ತೆರವುಗೊಳಿಸುವಂತೆ  ಸೂಚಿಸಿದ್ದಾರೆ.

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಗೃಹ ಇಲಾಖೆ ಪ್ರಾಥಮಿಕ ಹಂತದಲ್ಲಿ ವಿವಿಧ ಧರ್ಮಗಳ ಧಾರ್ಮಿಕ ಕೇಂದ್ರಗಳು ಹಾಗೂ ಅತಿಹೆಚ್ಚು ಶಬ್ದ ಮಾಡುವ ಬಾರ್ ಅಂಡ್ ರೆಸ್ಟೋರೆಂಟ್, ಡಿಸ್ಕೊತೆಕ್, ಲೈವ್‍ಬಾಂಡ್ ಹಾಗೂ ಹನ್ನೆರಡು ಕೈಗಾರಿಕೆಗಳಿಗೆ ನೋಟಿಸ್ ನೀಡಲು ಮುಂದಾಗಿದೆ.

ಒಂದು ವಾರದೊಳಗೆ ನೋಟಿಸ್‍ಗೆ ಸಂಬಂಧಪಟ್ಟವರಿಂದ ಉತ್ತರ ಬಾರದಿದ್ದರೆ  ಇವುಗಳನ್ನು ತೆರವುಗೊಳಿಸುವುದು ಖಚಿತ.

ಧಾರ್ಮಿಕ ಕೇಂದ್ರಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳು ಎಷ್ಟು ಪ್ರಮಾಣದ ಡೆಸಿಬಲ್ ಇರಬೇಕೆಂದು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನೀಡಿರುವ ಆದೇಶವನ್ನು ಪಾಲಿಸಲಾಗಿದೆಯೆ ಎಂಬ ಬಗ್ಗೆ ಸಂಬಂಧಪಟ್ಟ ಇಲಾಖೆ ಅಕಾರಿಗಳು ಪರಿಶೀಲನೆ ನಡೆಸುವರು.

ಒಂದು ವೇಳೆ ಯಾವುದಾದರೂ ಧಾರ್ಮಿಕ ಕೇಂದ್ರಗಳಲ್ಲಿ ಹೆಚ್ಚಿನ ಪ್ರಮಾಣದ ಡೆಸಿಬಲ್ ಅಳವಡಿಸಿಕೊಂಡಿದ್ದರೆ,ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡುತ್ತಿದ್ದರೆ ತಕ್ಷಣವೇ ಅದನ್ನು ತೆರವುಗೊಳಿಸಲು ಸ್ಥಳೀಯ ಆಡಳಿತ ಸೂಚನೆ ನೀಡಲಿದೆ. ಈಗಾಗಲೇ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡ ಹಿರಿಯ ಪೊಲೀಸ್ ಅಕಾರಿಗಳಿಂದ ಹಿಡಿದು ಜಿಲ್ಲಾ ಎಸ್ಪಿಗಳೊಂದಿಗೂ ಮಾತುಕತೆ ನಡೆಸಿದ್ದು, ಹಿಂದೂ, ಮುಸ್ಲಿಂ , ಕ್ರಿಶ್ಚಿಯನ್ ಎನ್ನದೆ ಹೆಚ್ಚಿನ ಶಬ್ದ ಹೊರಸೂಸುವ ಧ್ವನಿವರ್ಧಕಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಸೂಚನೆ ಕೊಟ್ಟಿದ್ದಾರೆ.