ಗ್ಯಾನವ್ಯಾಪಿ ಮಸೀದಿಯಲ್ಲಿ ವಿಡಿಯೋ ಸರ್ವೆಗೆ ಕೋರ್ಟ್ ಗ್ರೀನ್ ಸಿಗ್ನಲ್

ವಾರಣಾಸಿ: ವಿಶ್ವಪ್ರಸಿದ್ಧ ಕಾಶಿ ವಿಶ್ವನಾಥ ಮಂದಿರದ ಬಳಿ ಇರುವ ಗ್ಯಾನವ್ಯಾಪಿ ಮಸೀದಿಯೊಳಗೆ ವಿಡಿಯೋ ಸರ್ವೆಗೆ ಕೋರ್ಟ್ ಅನುಮತಿ ನೀಡಿದೆ.

ಮಸೀದಿಯೊಳಗೆ ಹಿಂದು ದೇವರ ವಿಗ್ರಹವಿದ್ದು, ಅವುಗಳ ಪೂಜೆಗೆ ಅವಕಾಶ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮೇ 17ರೊಳಗೆ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಗ್ಯಾನವ್ಯಾಪಿ ಮಸೀದಿಯೊಳಗೆ ಯಾವಾಗ ವಿಡಿಯೋ ಚಿತ್ರೀಕರಣ ಮಾಡಬೇಕು ಮತ್ತು ವಿಡಿಯೋಗ್ರಫಿ ಉಸ್ತುವಾರಿಗೆ ನೇಮಕಗೊಂಡ ಅಧಿಕಾರಿಯ ಬದಲಾವಣೆ ಮಾಡಬೇಕೇ ಎಂಬ ವಿಷಯಗಳ ಬಗ್ಗೆ ನ್ಯಾಯಾಲಯ ಸುದೀರ್ಘ ವಿಚಾರಣೆ ನಡೆಸಿತು.

ನ್ಯಾಯಾಲಯ ಸರ್ವೆ ಕಮೀಷನ್ ಬದಲಾವಣೆಗೆ ನಕಾರ ವ್ಯಕ್ತಪಡಿಸಿ ಇನ್ನೂ ಇಬ್ಬರು ಸರ್ವೆ ಕಮೀಷನರ್‍ಗಳ ನೇಮಕಾತಿಗೆ ಆದೇಶ ನೀಡಿ ಸ್ಥಳ ಪರಿಶೀಲನೆಗೆ ನಿರ್ದೇಶನ ನೀಡದೆ.

ಇದರಿಂದ ಹಿಂದೂಪರ ಅರ್ಜಿದಾರರಿಗೆ ಭಾರಿ ಗೆಲುವು ದೊರೆತಂತಾಗಿದೆ.

ಮಸೀದಿಯೊಳಗೆ ಹಿಂದೂ ದೇವರ ವಿಗ್ರಹವಿದ್ದು ಅವುಗಳ ಪೂಜೆಗೆ ಅವಕಾಶ ನೀಡಬೇಕೆಂಬ ಅರ್ಜಿ ದಾಖಲಾಗಿದ್ದರ ಹಿನ್ನೆಲೆಯಲ್ಲಿ ಕೋರ್ಟ್‌ನ ಈ ಹಿಂದಿನ ಆದೇಶದಂತೆ ಮೇ 6, 7ರಂದು ಅಧಿಕಾರಿಗಳ ತಂಡ ಮಸೀದಿಯ ವಿಡಿಯೋ ಸಮೀಕ್ಷೆಗೆ ತೆರಳಿತ್ತು.

ಆದರೆ, ಮಸೀದಿಯ ಒಳಗೆ ವಿಡಿಯೋ ಮಾಡಲು ಆಡಳಿತ ಮಂಡಳಿಯವರು ಅವಕಾಶ ನೀಡಿರಲಿಲ್ಲ. ಮೇಲುಸ್ತುವಾರಿ ಅಧಿಕಾರಿಯನ್ನು ಬದಲಾಯಿಸಬೇಕೆಂದು ಕೋರ್ಟ್‍ಗೆ ಮನವಿ ಸಲ್ಲಿಸಿದ್ದರು.

ಮಸೀದಿಯ ಪಶ್ಚಿಮ ಗೋಡೆ ಮೇಲೆ ಇರುವ ಕೆಲವು ದೇವತೆಗಳ ವಿಗ್ರಹಗಳಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲು ನ್ಯಾಯಾಲಯದ ಅನುಮತಿ ಕೋರಿ ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿ ಮೇರೆಗೆ ನ್ಯಾಯಾಲಯವು ಈ ಹಿಂದೆ ಸಮೀಕ್ಷೆಗೆ ಆದೇಶಿಸಿತ್ತು.

ಇದಕ್ಕಾಗಿ ನ್ಯಾಯಾಲಯ ಅಜಯ್‍ಕುಮಾರ್ ಮಿಶ್ರಾ ಅವರನ್ನು ಕೋರ್ಟ್ ಕಮೀಷನರ್ ಆಗಿ ನೇಮಿಸಿತ್ತು.
ಇದಾದ ಬಳಿಕ ಮಸೀದಿ ಆಡಳಿತ ಸಮಿತಿ ಕೂಡ ನ್ಯಾಯಾಲಯದ ಮೆಟ್ಟಿಲೇರಿದ್ದು, ಅಜಯ್‍ಕುಮಾರ್ ಮಿಶ್ರಾ ಅವರನ್ನು ಬದಲಾಯಿಸಬೇಕೆಂದು ಮನವಿ ಮಾಡಿತ್ತು.