ಸಚಿವ ಸ್ಥಾನಕ್ಕಾಗಿ ಯಾರ ಮನೆಗೂ ಹೋಗುವುದಿಲ್ಲ; ವರಿಷ್ಠರ ಸೂಚನೆಗೆ ಬದ್ದ ಆರಗ

ಬೆಂಗಳೂರು: ನಾನು ಸಚಿವ ಸ್ಥಾನಕ್ಕಾಗಿ ಯಾರ ಮನೆಯ ಬಳಿಯೂ ಹೋಗುವುದಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದನಾಗಿರುತ್ತೇನೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂತ್ರಿ ಸ್ಥಾನ ನೀಡಿದ್ದಾರೆ. ಕೊಟ್ಟಿರುವ ಖಾತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ ತೃಪ್ತಿ ಇದೆ ಎಂದು ಹೇಳಿದರು.

ಮಂತ್ರಿ ಸ್ಥಾನಕ್ಕಾಗಿ ನಾನು ಯಾರ ಮನೆಗೂ ಹೋದವನಲ್ಲ. ಮುಂದೆಯೂ ಹೋಗುವುದಿಲ್ಲ. ಸಚಿವ ಸ್ಥಾನ ಇರಲಿ, ಬಿಡಲಿ ಪಕ್ಷ ಹಾಗೂ ವರಿಷ್ಠರು ಏನು ಹೇಳುತ್ತಾರೋ ಅದನ್ನು ಪಾಲಿಸುತ್ತೇನೆ ಎಂದು ತಿಳಿಸಿದರು.

ನಾನು ವೈಯಕ್ತಿಕ ಕಾರಣಗಳಿಗಾಗಿ ದೆಹಲಿಗೆ ಹೋಗಿದ್ದೆ, ಪಕ್ಷದ ವರಿಷ್ಠರನ್ನಾಗಲಿ, ಯಾವುದೇ ಮುಖಂಡರನ್ನೂ ಭೇಟಿಯಾಗಿಲ್ಲ ಎಂದು ಆರಗ ಸ್ಪಷ್ಟಪಡಿಸಿದರು.

ಸಿಐಡಿ ತನಿಖಾ ತಂಡ ಪಿ ಎಸ್ ಐ ಪರೀಕ್ಷಾ ಪ್ರಕರಣದಲ್ಲಿ ಭಾಗಿಯಾಗಿರುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಗುರುವಾರ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ವಿಚಾರಣೆ ವೇಳೆ ಕೆಲವು ಮಹತ್ವದ ವಿಷಯಗಳು ಲಭ್ಯವಾಗಿವೆ. ಮುಂದಿನ ದಿನಗಳಲ್ಲಿ ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದರು.