ಗಣಪತಿ ಸಚ್ಚಿದಾನಂದ ಆಶ್ರಮ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ -ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ

ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೆ ಜನ್ಮದಿನೋತ್ಸವ ಪ್ರಯುಕ್ತ ಇಂದು ಬೆಳಿಗ್ಗೆ  ಶ್ರೀಚಕ್ರ ಪೂಜೆ ದತ್ತಾತ್ರೆಯ ಹೋಮ ನೆರವೇರಿಸಲಾಯಿತು.

ನಂತರ ಸ್ವಾಮೀಜಿಯವರನ್ನು ಜಾನಪದ ಕಲಾಮೇಳದೊಂದಿಗೆ ಮೆರವಣಿಗೆಯಲ್ಲಿ ನಾದಮಂಟಪಕ್ಕೆ ಕರೆತಂದುದು ವಿಶೇಷವಾಗಿತ್ತು.

ಇದಾದ ನಂತರ ಚೈತನ್ಯಾರ್ಚನೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ನಾದನಿಧಿ  ಪ್ರಶಸ್ತಿಯನ್ನು ಖ್ಯಾತ  ಪಿಯಾನೋ ವಾದಕ  ನವದೆಹಲಿಯ ವಿದ್ವಾನ್‌‌ ಬ್ರಿಯಾನ್ ಸೈಲಸ್, ಕೊಳಲು ವಾದಕ ಚನ್ನೈನ ವಿದ್ವಾನ್ ಬಿ.ವಿ.ಬಾಲಸಾಯಿ ಹಾಗೂ ಸಸ್ಯ ಬಂಧು ಪ್ರಶಸ್ತಿಯನ್ನು ಬೋನ್ಸಾಯ್ ನಲ್ಲಿ ಪ್ರಾವೀಣ್ಯತೆ ಪಡೆದಿರುವ   ಕಾಕಿನಾಡದ  ಡಾ. ಚಂದ್ರು ವೀರರಾಜು ಚೌದರಿ, ಮುಂಬೈನವರಾದ ರಾಜೀವ್ ವೈದ್ಯ ಹಾಗೂ ಸುಧೀರ್ ಜಾದವ್ ಹಾಗೂ ತೋಟಗಾರಿಕೆಯಲ್ಲಿ ನುರಿತರಾದ ಮೈಸೂರಿನ ಕೊಂಡೂರು ಕೃಷ್ಣರಾಜು ಮತ್ತು ವಿಶಾಖಪಟ್ಟಣದ ಮಂತೆನ ಆಂಜನೇಯ‌ ರಾಜು‌ ಅವರು ಗಳಿಗೆ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಎಡನೀರ್ ರಾಮಕೃಷ್ಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮಾತನಾಡಿ, ನಮ್ಮ ಧಾರ್ಮಿಕ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಕೊಂಡಾಡಿದರು.

ಗಣಪತಿ ಶ್ರೀಗಳು ಸಂಗೀತದ ಮೂಲಕ ಜನರ ಮನಕ್ಲೇಷ ಹಾಗೂ ಅನಾರೋಗ್ಯ ಗುಣಪಡಿಸುವ ವಿಶೇಷತೆಯನ್ನು ಅಳವಡಿಸಿ ಕೊಂಡಿರುವುದು ವಿಶೇಷ ಎಂದು ಬಣ್ಣಿಸಿದರು.

ಒಂದು ವೇಳೆ ಗಣಪತಿ ಶ್ರೀಗಳು ಹಿಮಾಲಯಕ್ಕೆ ಹೋಗಿಬಿಟ್ಟಿದ್ದರೆ ಸಮಾಜಕ್ಕೆ ಬಹಳ ನಷ್ಟವಾಗಿಬಿಡುತ್ತಿತ್ತು. ಅವರು ಇಲ್ಲೇ ನೆಲೆಸಿ ಸಮಾಜದ ಉದ್ದಾರಕ್ಕೆ ಶ್ರಮಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಸಚ್ಚಿದಾನಂದ ಭಾರತಿ ಸ್ವಾಮೀಜಿ ನುಡಿದರು.

ಗಣಪತಿ ಶ್ರೀಗಳಿಗೆ 80ನೆ ವರ್ಷದ ಜನ್ಮದಿನದ ‌ಶುಭಕಾಮನೆಗಳನ್ನು ಅವರು ಸಲ್ಲಿಸಿದರು.

ಕಿರಿಯ ಶ್ರೀಗಳಾದ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ಹಾಗೂ ಹರಿಹರ ಪಂಚಮಸಾಲಿ ಮಠದ ಶ್ವಾಸಗುರು  ಶ್ರೀ ವಚನಾನಂದ ಸ್ವಾಮೀಜಿ‌ ಉಪಸ್ಥಿತರಿದ್ದರು.