ಸಿದ್ದರಾಮಯ್ಯಗೆ  ಆರ್ ಎಸ್ ಎಸ್ ಬಗ್ಗೆ 1% ಜ್ಞಾನ ಇಲ್ಲ -ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಸಿದ್ದರಾಮಯ್ಯ ಅವರು ಆರ್ ಎಸ್ ಎಸ್ ಬಗ್ಗೆ ಅಧ್ಯಯನ ಮಾಡಿಲ್ಲ. ಅವರನ್ನು ಒಮ್ಮೆ ಆರ್ ಎಸ್ ಎಸ್ ಕಚೇರಿಗೆ ಕರೆದೊಯ್ಯುತ್ತೇವೆ. ಅವರು ಅಲ್ಲಿನ ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ಮಾಡಲಿ. ಇಲ್ಲವೇ ಆರ್ ಎಸ್ ಎಸ್ ಕುರಿತ ಪುಸ್ತಕ ನೀಡುತ್ತೇವೆ ಎಂದು  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಭಾನುವಾರ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಾತಿಗೆ ತೂಕ ಇತ್ತು. ಆದರೀಗ ಅವರ ಪಕ್ಷದ ಕಾರ್ಯಕರ್ತರೇ ಅವರ ಮಾತನ್ನು ಕೇಳುತ್ತಿಲ್ಲ. ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಕಡೆಗಣನೆ ಮಾಡಲಾಗಿದೆ. ಅವರ ಮಾತಿಗೆ ಕಿಮ್ಮತ್ತು ಇಲ್ಲ. ಕಡಗಣನೆ ಮಾಡುವಾಗ ಹೀಗೆ ಆರ್ ಎಸ್ ಎಸ್, ಮತ್ತೊಂದು ವಿಚಾರ ಸೃಷ್ಟಿಸಿ ಮುಂಚೂಣಿಗೆ ಬರಲು ಯತ್ನಿಸುತ್ತಾರೆ ಎಂದರು.

ಕಳೆದ ಎರಡು ವರ್ಷಗಳಿಂದ ನಾನು ಆರ್ ಎಸ್ ಎಸ್ ಬಗ್ಗೆ ತಿಳಿದುಕೊಂಡಿದ್ದೇನೆ. ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇದನ್ನ ಸಿದ್ದರಾಮಯ್ಯ ಅವರು ಸಹಿಸುತ್ತಿಲ್ಲ. ಸದ್ಯದಲ್ಲೇ ಅವರಿಗೆ ಆರ್ ಎಸ್ ಎಸ್ ಕುರಿತ ಪುಸ್ತಕ ಕಳುಹಿಸಲಾಗುವುದು ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವಂತಿಲ್ಲ. ಸುಮ್ಮನೇ ಟೀಕೆ ಮಾಡುವ ಬದಲು ವಿರೋಧ ಪಕ್ಷವಾಗಿ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವೀಕ್ಷಿಸಲಿ. ಆರ್ ಎಸ್ ಎಸ್ ಬಗ್ಗೆ 1% ಜ್ಞಾನ ಇಲ್ಲ ಎಂದರು.

ಪಠ್ಯ ಪುಸ್ತಕಗಳನ್ನು ಯಾರೂ ಕೂಡ ಸರಿಯಾಗಿ ಓದದೇ ರಾಜಕೀಯ ಮಾಡುತ್ತಿದ್ದಾರೆ. ಮೊದಲು ಪುಸ್ತಕ ಓದಲಿ.‌ ಕೇಸರಿಕರಣ ಬಗ್ಗೆ ಚರ್ಚೆ ಆಮೇಲೆ ಮಾಡಲಿ. ವಿಶ್ವನಾಥ್ ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದಾರೆ,  ಹೀಗಾಗಿ ಮಾತನಾಡುತ್ತಾರೆ ಎಂದರು.