ಮೈಸೂರು: ಸಾಹಿತಿಗಳ ಪಠ್ಯ ವಾಪಾಸ್ ಚಳವಳಿ ಟೂಲ್ ಕೀಟ್ ನ ಒಂದು ಭಾಗ ಎಂದು ಸಂಸದ ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು ದೇವನೂರು ಮಹದೇವ್ ಸೇರಿದಂತೆ ಹಲವರ ಪಠ್ಯವನ್ನು 10, 12 ವರ್ಷದಿಂದ ಮಕ್ಕಳು ಓದಿದ್ದಾರೆ. ಈಗ ಕೆಲವರ ಪಠ್ಯ ಕೈ ಬಿಡಲಾಗಿದೆ ಎಂದು ಹೇಳಿದರು.
ತಮ್ಮ ಪಠ್ಯ ಕೈ ಬಿಟ್ಟಿದ್ದರೂ ಕೂಡ ಕೆಲ ಸಾಹಿತಿಗಳು ಪಠ್ಯ ವಾಪಾಸ್ ಪಡೆದಿದ್ದೇವೆ ಎಂದು ಪತ್ರ ಬರೆದಿದ್ದಾರೆ. ಇದರಲ್ಲಿ ಅರ್ಥವಿದೆಯಾ ಎಂದು ಪ್ರಶ್ನಿಸಿದರು.
ಸಾಹಿತಿ ಹಂಪಾ ನಾಗರಾಜಯ್ಯ ಅಕಾಡೆಮಿಗೆ ರಾಜೀನಾಮೆ ಕೊಟ್ಟಿದ್ದಾರೆ. ಅವರ ಪತ್ನಿ ಇನ್ನೂ ಹುದ್ದೆಯಲ್ಲೇ ಇದ್ದಾರೆ. ಅದರ ಅರ್ಥ ಅವರ ಮನೆಯಲ್ಲೆ ಸಮ್ಮತಿ ಇಲ್ಲ ಎಂಬುದು ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಈ ಮೊದಲು ಭಗತ್ ಸಿಂಗ್, ನಾರಾಯಣ್ ಗುರು ವಿಚಾರವಾಗಿ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದರೂ ಯಾರೂ ಬರಲಿಲ್ಲ. ಇವರು ವಿಚಾರ ಹೀನರಾಗಿಲ್ಲದಿದ್ದರೆ ಚರ್ಚೆಗೆ ಬರುತ್ತಿದ್ದರು ಎಂದು ಮಾರ್ಮಿಕವಾಗಿ ಪ್ರತಾಪ್ ಸಿಂಹ ನುಡಿದರು.
ಕುವೆಂಪು ಅವರಿಗೆ ಅತಿ ಹೆಚ್ಚು ಗೌರವ ಕೊಟ್ಟಿರುವುದು ಬಿಜೆಪಿ. ಸದಾನಂದಗೌಡರು ಮುಖ್ಯಮಂತ್ರಿ ಆಗಿದ್ದಾಗ ನಾಡಗೀತೆ ಆಯ್ತು ಎಂದು ತಿಳಿಸಿದರು.
ಮೋದಿ ಅಧಿಕಾರಕ್ಕೆ ಬಂದಾಗ ಪ್ರಶಸ್ತಿ ವಾಪಸ್ಸು ನೀಡಿದರು. ಇದೀಗ ಪಠ್ಯದ ಲೇಖನ ವಾಪಸ್ಸಿಗೆ ಪತ್ರ ಬರೆಯುತ್ತಿದ್ದಾರೆ. ಇದು ಕಾಂಗ್ರೇಸ್ ಅವರಿಂದ ಉಪಕೃತರಾದವರ ಕೆಲವರ ನಾಟಕ ಎಂದು ಕಿಡಿಕಾರಿದರು.
15 ವರ್ಷದಿಂದ ಇವರ ಸಾಹಿತ್ಯ ಕೃಷಿ ನಿಂತು ಹೋಗಿದೆ ಎಂದು ಬರಗೂರು ರಾಮಚಂದ್ರಪ್ಪಗೆ ಟಾಂಗ್ ನೀಡಿದ ಸಂಸದರು ಕಾಂಗ್ರೆಸ್ ಪರ ನಿಲ್ಲಲು ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ ಎಂದರು.

