ಆದೇಶ ಪಾಲಿಸದವರ ಮೇಲೆ ಗುಂಡು – ಪ್ರಮೋದ್ ಮುತಾಲಿಕ್

ಬೆಂಗಳೂರು: ಮಸೀದಿಗಳಲ್ಲಿ ಸರ್ಕಾರದ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಗರಂ ಆಗಿರುವ ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಾವೇ ಕಾನೂನು ಕೈಗೆ‌ ತೆಗೆದುಕೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು ಮಸೀದಿಗಳಲ್ಲಿ ಆಜಾನ್ ಶಬ್ದ ನಿಲ್ಲಿಸಲು ಸರ್ಕಾರ ಕ್ರಮಕೈಗೊಳ್ಳಬೇಕು,ಇದು ಸಾಧ್ಯವಾಗದಿದ್ದರೆ ನಮಗೆ ಅಧಿಕಾರ ನೀಡಲಿ ನಾವೇ ಇದನ್ನು 24 ಗಂಟೆಯೊಳಗೆ ನಿಲ್ಲಿಸುತ್ತೇವೆ ಎಂದು ಸವಾಲು ಹಾಕಿದರು.

ಆಗ ನಮ್ಮ ಮಾತನ್ನು ಕೇಳದಿದ್ದರೆ ಅಂಬೇಡ್ಕರ್ ಅವರ ಸಂವಿಧಾನದಂತೆ ನಾವೇ ಕಾನೂನು ಕೈಗೆ ತೆಗೆದುಕೊಂಡು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡದವರ ಮೇಲೆ ಗುಂಡು ಹಾರಿಸಿಯಾದರೂ ಇದನ್ನು ಜಾರಿಗೆ ತರುತ್ತೇನೆ  ಎಂದು ಮುತಾಲಿಕ್ ಹೇಳಿದರು.

ಮಾಸೀದಿಗಳಲ್ಲಿ ಇದುವರೆಗೆ ಮೈಕ್ ಗಳು ಕೆಳಗಿಳಿದಿಲ್ಲ.ಸರ್ಕಾರದ ಆದೇಶ ಪಾಲನೆಯಾಗುತ್ತಿಲ್ಲ,ಈ ಸರ್ಕಾರ ಕ್ರಮ ಕೈಗೊಳ್ಳದೆ ಏನು ಮಾಡುತ್ತಿದೆ ಎಂದು ಗರಂ ಆದರು.

ಶಬ್ದಮಾಲಿನ್ಯ ಉಂಟುಮಾಡುವ ಅಜಾನ್ ವಿರುದ್ಧ ಕ್ರಮಕೈಗಳ್ಳುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಎಲ್ಲಾ ಬಿಜೆಪಿ ಶಾಸಕರ ಕಚೇರಿ ಮುಂದೆ  ಜೂನ್ 8ರಂದು ಶ್ರೀ ರಾಮಸೇನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮುತಾಲಿಕ್ ತಿಳಿಸಿದರು.

ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಹಿಂದುತ್ವ ಹಾಗೂ ಅಭಿವೃದ್ಧಿ ವಿಷಯದಲ್ಲಿ ಒಂದಷ್ಟನ್ನಾದರೂ ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.