ಬೆಂಗಳೂರು: ಸಬ್ಸಿಡಿಗಳಿಗೆ ಕತ್ತರಿ, ಕಾರ್ಪೊರೇಟ್ ಬಂಡವಾಳಗಾರರೊಂದಿಗೆ ದೋಸ್ತಿ ಇವೇ ಪ್ರಧಾನಿ ನರೇಂದ್ರ ಮೋದಿ ಅವರ ಎಂಟು ವರ್ಷಗಳ ಸಾಧನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸಬ್ಸಿಡಿಗಳನ್ನು ನೀಡುವುದರಿಂದ ಆರ್ಥಿಕತೆಯು ವೇಗ ಪಡೆಯುತ್ತದೆ ಎಂಬುದು ಅರ್ಥಶಾಸ್ತ್ರ ಗೊತ್ತಿರುವ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ.
ಆದರೆ ಮೋದಿ ಸರ್ಕಾರ ಮತ್ತು ಆ ಸರ್ಕಾರದ ಹಿಂದೆ ಇರುವ ಆರ್‌ಎಸ್‌ಎಸ್ ಪ್ರಣೀತ ಜನರಿಗೆ ಇದು ಅರ್ಥವಾಗುತ್ತಿಲ್ಲ ಎಂದು ಕುಟುಕಿದ್ದಾರೆ.
ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ತಂದು ಕೃಷಿಯನ್ನೂ ಕೂಡ ಅದಾನಿ, ಅಂಬಾನಿ ಮುಂತಾದ ಬಂಡವಾಳಿಗರಿಗೆ ಕೊಟ್ಟು ರೈತರನ್ನು ಸರ್ವನಾಶ ಮಾಡಲು ಹೊರಟಿತ್ತು.
ಆದರೆ ರೈತರು ನಡೆಸಿದ ವೀರೋಚಿತ ಹೋರಾಟಗಳಿಂದ ಕಾಯ್ದೆಗಳನ್ನು ಕೈ ಬಿಡಬೇಕಾಯಿತು ಎಂದು ತಿಳಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್‌ಗಳಿಂದಲೆ ೨೬ ಲಕ್ಷ ಕೋಟಿ ರೂಪಾಯಿಗಳನ್ನು ದೇಶದ ಜನರಿಂದ ದೋಚಿಕೊಳ್ಳಲಾಗಿದೆ. ಇಷ್ಟೊಂದು ಹಣ ಎಲ್ಲಿ ಹೋಯಿತು, ಇದರ ಲಾಭ ಜನ ಸಾಮಾನ್ಯರಿಗೇಕೆ ಸಿಗಲಿಲ್ಲ ಈ ಎಲ್ಲ ಪ್ರಶ್ನೆಗಳಿಗೂ ಜನರಿಗೆ ಮೋದಿಯವರ ಸರ್ಕಾರ ಲೆಕ್ಕ ಕೊಡಬೇಕಾಗಿದೆ ಎಂದು ಸಿದ್ದು ಹೇಳಿದ್ದಾರೆ.
ಅದಕ್ಕೂ ಮೊದಲು ಅಮೆರಿಕ, ಯುರೋಪು, ಆಸ್ಟ್ರೇಲಿಯ, ಜಪಾನ್ ಮತ್ತು ನ್ಯೂಜಿಲ್ಯಾಂಡ್ ದೇಶಗಳಲ್ಲಿ ರೈತರಿಗೆ, ಜನಸಾಮಾನ್ಯರಿಗೆ ನೀಡುತ್ತಿರುವ ಸಬ್ಸಿಡಿಗಳಂತೆ ಭಾರತದಲ್ಲೂ ನೀಡಿ ಜನರ ಬದುಕನ್ನು ಸುಧಾರಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

