ಪ್ರತಿಭಟನೆ ಮಾಡುವುದು ನಮ್ಮ ಹಕ್ಕು -ಡಿಕೆಶಿ ‌ಗುಡುಗು

ಬೆಂಗಳೂರು: ಬಿಜೆಪಿ ಸರ್ಕಾರ ಹೊಸ ಸಂಪ್ರದಾಯ ಆರಂಭಿಸುತ್ತಿದ್ದು, ಇದೇನು ತುರ್ತು ಪರಿಸ್ಥಿತಿಯೇ, ಇದು ಪ್ರಜಾಪ್ರಭುತ್ವದ ಸರ್ಕಾರವೇ, ಪ್ರತಿಭಟನೆ ಮಾಡುವುದು ನಮ್ಮ ಹಕ್ಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ‌ ಆಗಿ ಹೇಳಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ‌ಮಾತನಾಡಿದ ಅವರು,ಇ.ಡಿ. ಅಧಿಕಾರಿಗಳು ನನ್ನನ್ನು ಕರೆದುಕೊಂಡು ಹೋದಾಗ ಸಾವಿರಾರು ಜನ ನ್ಯಾಷನಲ್ ಕಾಲೇಜಿನಿಂದ ಫ್ರೀಡಂ ಪಾರ್ಕ್ ವರೆಗೂ ಮೆರವಣಿಗೆ ಬಂದಿದ್ದರು. ಆಗ ಯಾರಾದರೂ ಗಲಾಟೆ ಮಾಡಿದ್ದರಾ, ಅವರ ನೋವು, ದುಃಖ, ಬೇಸರವನ್ನು ವ್ಯಕ್ತಪಡಿಸಿದ್ದರು‌ ಎಂದು ಹೇಳಿದರು.

ಇಡೀ ದೇಶದುದ್ದಗಲಕ್ಕೂ ನಮ್ಮ ನಾಯಕರು ತಮಗಾಗುತ್ತಿರುವ ಅನ್ಯಾಯವನ್ನು ಪ್ರಶ್ನಿಸುತ್ತಿದ್ದಾರೆ ಪ್ರತಿಭಟನೆ ಮಾಡುವುದು ನಮ್ಮ ಹಕ್ಕು ಎಂದರು.

ಸೋಮವಾರ ಪ್ರತಿಭಟನೆ ಆರಂಭವಾಗುವ ಮುನ್ನವೇ ನಮ್ಮ ಯೂಥ್ ಕಾಂಗ್ರೆಸ್ ಅಧ್ಯಕ್ಷ ಬಿ. ವಿ. ಶ್ರೀನಿವಾಸ್ ಅವರನ್ನು ಬಂಧಿಸಲು ಪ್ರಯತ್ನಿಸಿದ್ದರು. ಅವರು ಪ್ರತಿಭಟನೆಗೆ ಹೋಗುವ ಮುನ್ನವೇ ವಶಕ್ಕೆ ಪಡೆಯಲು ಯತ್ನಿಸಿದರು.

ನಮ್ಮ ಪಾಲಿಗೆ ಪಕ್ಷದ ಕಚೇರಿ ಮನೆ, ದೇವಾಲಯ ಇದ್ದಂತೆ. ನಮ್ಮ ನಾಯಕರು ಎಐಸಿಸಿ ಕಚೇರಿಗೆ ಹೋದರೆ, ಅಲ್ಲೇ ಅವರನ್ನು ಬಂಧಿಸುತ್ತೇನೆ ಎಂದರೆ ಇದು ಅನ್ಯಾಯವಲ್ಲವೇ, ನಮ್ಮ ನಾಯಕರು ಯಾವ ಅಪರಾಧ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಇಂತಹ ನೀಚ ರಾಜಕಾರಣ ಹಿಂದೆಂದೂ ಕಂಡಿಲ್ಲ. ಇದು ತುರ್ತು ಪರಿಸ್ಥಿತಿಗೂ ಮೀರಿದ ಹೀನಾಯ ಸ್ಥಿತಿ. ನಾವಿದನ್ನು ಖಂಡಿಸುತ್ತೇವೆ. ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಡಿಕೆಶಿ ತಿಳಿಸಿದರು.

ನಮ್ಮ ನಾಯಕರು ತಪ್ಪು ಮಾಡಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ನೆಹರೂ, ತಿಲಕರು ಹಾಗೂ ವಲ್ಲಭಬಾಯಿ ಪಟೇಲರು ಸೇರಿ ಆರಂಭಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಉಳಿಸಿಕೊಂಡು ಬಂದಿದ್ದೇವೆ. ಇದು ಖಾಸಗಿ ಆಸ್ತಿಯಲ್ಲ, ದೇಶದ ಆಸ್ತಿ. ನಮ್ಮ ನಾಯಕರು ಕೇವಲ ಟ್ರಸ್ಟಿಯಾಗಿದ್ದಾರೆ ಎಂದು ಹೇಳಿದರು.

ಖರ್ಗೆ ಅವರು ಈಗ ಟ್ರಸ್ಟಿಯಾಗಿದ್ದಾರೆ. ಅವರೇನು ಅದರ ಆಸ್ತಿನೆಲ್ಲಾ ಬರೆದುಕೊಂಡು ಬಂದಿದ್ದಾರಾ? ನೆಹರೂ ಕುಟುಂಬದವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದು, ಇದಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಹೆದರುವುದಿಲ್ಲ ಡಿ.ಕೆ.ಶಿವಕುಮಾರ್ ತಿಳಿಸಿದರು.