ಯೋಗಕ್ಕಿದೆ ವಿಶ್ವಕ್ಕೆ ಶಾಂತಿ ನೀಡುವ ಶಕ್ತಿ ಮೋದಿ

ಮೈಸೂರು: ಇಡೀ ವಿಶ್ವಕ್ಕೆ ಶಾಂತಿ ನೀಡುವಂತಹ ಶಕ್ತಿ ಯೋಗಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ಏರ್ಪಡಿಸಿದ್ದ ಯೋಗ ಕಾರ್ಯಕ್ರಮದಲ್ಲಿಮಾತನಾಡಿದರು.

ಯೋಗ ಕೇವಲ ವ್ಯಕ್ತಿಗಾಗಿ ಅಲ್ಲ, ಅದು ಮಾನವೀಯತೆಗಾಗಿ ವಿಶ್ವಕ್ಕೆ ಶಾಂತಿ ನೀಡುವ ಶಕ್ತಿ ಎಂದು ಹೇಳಿದರು.

ಯೋಗವು ನಮಗೆ ಶಾಂತಿಯನ್ನು ತರುತ್ತದೆ. ಕೇವಲ ನಮಗೆ ಮಾತ್ರವಲ್ಲ, ಯೋಗವು ನಮ್ಮ ರಾಷ್ಟ್ರ ಸೇರಿದಂತೆ ಇಡೀ ಜಗತ್ತಿಗೆ ಶಾಂತಿಯನ್ನು ತರುತ್ತದೆ ಎಂದು ಹೇಳಿದರು.

ಆರೋಗ್ಯವಂತ ದೇಹಕ್ಕೆ ಯೋಗಭ್ಯಾಸ ಅತೀ ಅಗತ್ಯ ಎಂದರು.

 ಯೋಗದ ಚಿತ್ರಗಳು ಯೋಗ ಅಭ್ಯಾಸದ ಕೇಂದ್ರಗಳಲ್ಲಿ, ಆಧ್ಯಾತ್ಮಿಕ ಸ್ಥಳಗಳಲ್ಲಿ ಮಾತ್ರ ಕಂಡು ಬರುತ್ತಿದ್ದವು. ಆದರೆ, ಇಂದು ವಿಶ್ವದೆಲ್ಲಡೆ ಯೋಗಭ್ಯಾಸ ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.

ಯೋಗವು ನಮ್ಮೊಳಗಿನ ಪ್ರತಿ ಅಂಗಗಳನ್ನು ಜಾಗೃತಗೊಳಿಸುತ್ತದೆ. ಅರಿವಿನ ಪ್ರಜ್ಞೆ ನಿರ್ಮಿಸುತ್ತದೆ. ನಾವು ಎಷ್ಟೇ ಒತ್ತಡದಲ್ಲಿದ್ದರೂ, ಕೆಲವು ನಿಮಿಷಗಳ ಧ್ಯಾನವು ನಮಗೆ ವಿಶ್ರಾಂತಿ ನೀಡುತ್ತದೆ. ಚೈತನ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು .

ಮೈಸೂರಿನಂತಹ ಆಧ್ಯಾತ್ಮಿಕ ಕೇಂದ್ರಗಳಿಂದ ಶತಮಾನಗಳಿಂದ ಪೋಷಿಸಿಕೊಂಡು ಬಂದಿರುವ ಯೋಗ ಶಕ್ತಿ ವಿಶ್ವ ಆರೋಗ್ಯಕ್ಕೆ ದಿಕ್ಸೂಚಿಯಾಗುತ್ತಿದೆ.

ಯೋಗವು ಜಾಗತಿಕ ಸಹಕಾರಕ್ಕೆ ಪರಸ್ಪರ ಆಧಾರವಾಗುತ್ತಿದೆ,

ಯೋಗವು ಮನುಕುಲಕ್ಕೆ ಆರೋಗ್ಯಕರ ಜೀವನದ ಆದ್ಯತೆ ತಿಳಿಸಿ ಆತ್ಮವಿಶ್ವಾಸ ನೀಡುತ್ತಿದೆ.

ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನದ ವಿಷಯ ಮಾನವೀಯತೆಗಾಗಿ ಯೋಗ ಎಂದು ಹೇಳಿದರು.

ಈ ವಿಷಯದ ಮೂಲಕ ಇಡೀ ಮಾನವಕುಲಕ್ಕೆ ಯೋಗದ ಸಂದೇಶವನ್ನು ಕೊಂಡೊಯ್ಯಲು ವಿಶ್ವಸಂಸ್ಥೆ ಮತ್ತು ಎಲ್ಲಾ ದೇಶಗಳಿಗೆ ನಾನು ಹೃತ್ಪೂರ್ವಕ ಧನ್ಯವಾದ ಹೇಳುತ್ತೇನೆ ಎಂದು ಮೋದಿ ನುಡಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಬಾರಿ ನಾವು ಪ್ರಪಂಚದಾದ್ಯಂತ ಗಾರ್ಡಿಯನ್ ರಿಂಗ್ ಆಫ್ ಯೋಗದ ವಿನೂತನ ಬಳಕೆಯನ್ನು ಮಾಡಿದ್ದೇವೆ ಎಂದು  ತಿಳಿಸಿದರು.

ಪ್ರಪಂಚದ ವಿವಿಧ ದೇಶಗಳಲ್ಲಿ ಸೂರ್ಯೋದಯದೊಂದಿಗೆ, ಸೂರ್ಯನ ಚಲನೆಯೊಂದಿಗೆ ಜನರು ಯೋಗ ಮಾಡುತ್ತಿದ್ದಾರೆ. ಯೋಗದ ಪ್ರಯಾಣವು ಶಾಶ್ವತ ಭವಿಷ್ಯದ ದಿಕ್ಕಿನಲ್ಲಿ ಹೀಗೆ ಮುಂದುವರಿಯುತ್ತದೆ‌ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯೋಗ ದಿನಾಚರಣೆಗೆ ಎಲ್ಲರಿಗೂ ಮೋದಿ ಶುಭ ಹಾರೈಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಸರ್ಬಾನಂದ್ ಸೋನಾವಾಲ,ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರಾಜಮಾತೆ ಪ್ರಮೋದಾದೇವಿ ಒಡೆಯರ್, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವರಾದ ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.

45 ನಿಮಿಷಗಳಲ್ಲಿ 19 ಯೋಗ ಭಂಗಿಗಳನ್ನು ಯೋಗಪಟುಗಳು ಪ್ರದರ್ಶಿಸಿದರು.

ಸ್ವತಃ ಮೋದಿಯವರೇ‌ ಎಲ್ಲಾ‌ ಆಸನಗಳನು ಮಾಡುವ ಮೂಲಕ‌ ಮಾದರಿಯಾದರು.