ನವದೆಹಲಿ: ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಸಿಆರ್‌ಪಿಎಫ್ ಕಮಾಂಡೋಗಳ ಜೆಡ್+ ಭದ್ರತೆಯನ್ನು ನೀಡಲಾಗಿದೆ.
ಸಶಸ್ತ್ರ ಪಡೆ ತಂಡ ಬುಧವಾರ ಮುಂಜಾನೆಯಿಂದಲೇ 64 ವರ್ಷದ ಮುರ್ಮು ಅವರ ಭದ್ರತೆಯನ್ನು ವಹಿಸಿಕೊಂಡಿದೆ ಎಂದು ಹಿರಿಯ ಅಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಿರಿಯ ನಾಯಕರನ್ನು ಒಳಗೊಂಡ ಪಕ್ಷದ ಸಂಸದೀಯ ಮಂಡಳಿಯ ಸಭೆಯ ನಂತರ ಮಂಗಳವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಒಡಿಶಾ ಮೂಲದ ಪಕ್ಷದ ನಾಯಕಿ ಮುರ್ಮು ಅವರನ್ನು ಅಭ್ಯರ್ಥಿ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಘೋಷಿಸಿದರು.
ನಂತರ, ಕೇಂದ್ರ ಗೃಹ ಸಚಿವಾಲಯವು ಮುರ್ಮು ಅವರ ಭದ್ರತೆಯ ಉಸ್ತುವಾರಿ ವಹಿಸಲು ತನ್ನ ವಿಐಪಿ ರಕ್ಷಣಾ ತಂಡವನ್ನು ನಿಯೋಜಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಗೆ ನಿರ್ದೇಶನ ನೀಡಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಒಡಿಶಾ ಮೂಲದ ಅರೆಸೇನಾ ಪಡೆಯ ಸುಮಾರು 14-16 ಸಿಬ್ಬಂದಿಯ ತುಕಡಿ ಭದ್ರತೆ ಒದಗಿಸುವ ಕಾರ್ಯವನ್ನು ವಹಿಸಿಕೊಂಡಿದೆ.
ಒಡಿಶಾದ ರಾಯರಂಗ್ಪುರದಲ್ಲಿರುವ ಅವರ ಮನೆಗೂ ಭದ್ರತಾ ಸಿಬ್ಬಂದಿ ಒದಗಿಸಲಾಗುತ್ತದೆ.

