ಹಾಸನ: ಕಾಂಗ್ರೆಸ್ ನಾಯಕರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಯೋಜನೆಗಳನ್ನು ವಿರೋಧಿಸುವ ಚಟ ಇದೆ ಎಂದು ಗೃಹ ಸಚಿವ ಆರಗ ಜ್ಞಾನೆಂದ್ರ ಟೀಕಿಸಿದರು.
ಹಾಸನದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಉತ್ತಮ ಯೋಜನೆಯಾಗಿದ್ದರೂ ಕಾಂಗ್ರೆಸ್‍ನವರು ವಿನಾಕಾರಣ ದೇಶದಲ್ಲಿ ಪ್ರತಿಭಟನೆ ಮಾಡುತ್ತಿದ್ದು, ನೇರವಾಗಿ ಅಗ್ನಿಪಥ್ ಯೋಜನೆ ವಿರೋಧಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ಮೋದಿ ಸರ್ಕಾರ ಹೊಸ ಯೋಜನೆಗಳನ್ನು ಜಾರಿ ಮಾಡಿದರೆ ಸಹಿಸುವುದಿಲ್ಲ. ನಮ್ಮ ಕಾಲದಲ್ಲಿ ಇಂತಹ ಯೋಜನೆಗಳು ಜಾರಿಯಾಗಲಿಲ್ಲವಲ್ಲ ಎಂಬ ಅಸಮಾಧಾನ ಇರುವುದರಿಂದ ಈ ರೀತಿ ವರ್ತನೆ ತೋರುತ್ತಿದ್ದಾರೆ ಎಂದು ದೂರಿದರು.
ಅಗ್ನಿಪಥ್ ಬಹಳ ಉತ್ತಮವಾದ ಯೋಜನೆಯಾಗಿದೆ. 17 ವರ್ಷದಿಂದ 23 ವರ್ಷದವರೆಗಿನ ಯುವಕರ ನೇಮಕಾತಿ ನಡೆಯಲಿದೆ. ಇವರಿಗೆ 45 ಸಾವಿರ ರೂ. ಸಂಬಳ ಸೇರಿದಂತೆ ನಾಲ್ಕು ವರ್ಷ ಪೂರೈಸಿದ ನಂತರ 12 ಲಕ್ಷ ಹಣವನ್ನು ನೀಡಲಾಗುತ್ತದೆ.
ಈ ವೇಳೆ 1 ಕೋಟಿ ವಿಮೆಯನ್ನು ಸಹ ಪ್ರತಿ ಅಭ್ಯರ್ಥಿ ಹೆಸರಲ್ಲಿ ಮಾಡಲಾಗುತ್ತದೆ. ಅಲ್ಲದೆ, ಸೈನ್ಯದಿಂದ ನಿವೃತ್ತಿಯಾದ ನಂತರ ಪೊಲೀಸ್ ಇಲಾಖೆಯಲ್ಲಿ ಶೇ.10ರಷ್ಟು ಮೀಸಲಾತಿ ಮತ್ತು ಅಗ್ನಿಶಾಮಕ ದಳದಲ್ಲಿ ಶೇ.50ರಷ್ಟು ಮೀಸಲಾತಿ ನೀಡಲು ಚಿಂತನೆ ಇದೆ ಎಂದು ಮಾಹಿತಿ ನೀಡಿದರು.
ಸೈನ್ಯಕ್ಕೆ ಕೇಂದ್ರ ಸರ್ಕಾರ ಪ್ರತಿವರ್ಷ 5 ಲಕ್ಷ ಕೋಟಿ ರೂ. ವ್ಯಯ ಮಾಡುತ್ತಿದೆ. ಅಲ್ಲದೆ, ಕೇವಲ ಪೆನ್ಷನ್‍ಗಾಗಿಯೇ 1.25 ಲಕ್ಷ ಕೋಟಿ ರೂ. ವ್ಯಯ ಮಾಡಲಾಗುತ್ತಿದೆ. ಇದನ್ನು ಸರಿದೂಗಿಸಲು ಅಗ್ನಿಪಥ್ ಯೊಜನೆ ಜಾರಿಗೆ ತರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸೈನಿಕರ ನಿವೃತ್ತಿ ವಯಸ್ಸನ್ನು 32 ರಿಂದ 25ಕ್ಕೆ ಇಳಿಸುವ ಚಿಂತನೆ ಇದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಕಚೇರಿ ಕಟ್ಟಡ ಹಾಗೂ ವಸತಿ ಸಂಕೀರ್ಣ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಿದೆ.
ಪ್ರಸಕ್ತ ವರ್ಷ 200 ಕೋಟಿ ರೂ. ವ್ಯಯಿಸಿ ರಾಜ್ಯದ ಮೂರು ಕಡೆ ಪೊಲೀಸ್ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ, 2025ರ ವೇಳೆಗೆ 10 ಸಾವಿರ ಕೋಟಿ ವೆಚ್ಚದಲ್ಲಿ ಪೊಲೀಸರಿಗೆ ವಸತಿ ವ್ಯವಸ್ಥೆ ಯೋಜನೆ ಜಾರಿಮಾಡಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಇಡಿಯವರು ಯಾರನ್ನೂ ಸುಮ್ಮನೆ ವಿಚಾರಣೆಗೆ ಕರೆಯುವುದಿಲ್ಲ. ತಪ್ಪು ಮಾಡಿದ್ದರೆ ಬಂಧಿಸುತ್ತಾರೆ. ತಪ್ಪು ಮಾಡಿಲ್ಲದಿದ್ದರೆ ಹೊರಗೆ ಬರುತ್ತಾರೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

