ಹಾಸನ: ಇ.ಡಿ. ವಿಚಾರಣೆ ಹೆಸರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಹಾಸನದಲ್ಲಿ ಬುಧವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಬಗ್ಗೆ ಮಾಹಿತಿ ತೆಗೆದುಕೊಳ್ಳಲು ನಿರಂತರವಾಗಿ ವಿಚಾರಣೆಗೆ ಕರೆಯುತ್ತಿದ್ದಾರೆ ಎಂದು ಹೇಳಿದರು.
ವಿಚಾರಣೆ ಮಾಡಲು ಐದು ದಿನಗಳು ಬೇಕಾ ಎಲ್ಲಾ ದಾಖಲಾತಿಗಳೂ ಇಡಿ ಬಳಿಯೇ ಇರುತ್ತವೆ. ಅರ್ಧ ಗಂಟೆಯಲ್ಲೇ ಎಲ್ಲಾ ವಿಚಾರಣೆ ಮಾಡಿ ಮುಗಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ರಾಹುಲ್ ಗಾಂಧಿ ಅವರಿಗೆ ಕಿರಿಕುಳ ನೀಡುವ ದುರುದ್ದೇಶದಿಂದ ಈ ರೀತಿ ವಿಚಾರಣೆ ಮಾಡುತ್ತಿದ್ದಾರೆ. ಸುಬ್ರಹ್ಮಣ್ಯಸ್ವಾಮಿ ದೂರು ನೀಡಿದರು ಎಂದು ತನಿಖೆ ಆರಂಭಿಸಿದ್ದಾರೆ ಎಂದು ಎಚ್‌ಡಿ ಕೆ ಟೀಕಿಸಿದರು.
ಕರ್ನಾಟಕದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಸ್ವತಃ ಪ್ರಧಾನಿಗಳಿಗೇ ಪತ್ರ ಬರೆದು ಶೇ.40 ಕಮಿಷನ್ ಬಗ್ಗೆ ದೂರಿದ್ದರು. ಈ ಬಗ್ಗೆ ಯಾಕೆ ಇಲ್ಲಿಯವರೆಗೆ ತನಿಖೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು.
ಕೇವಲ ರಾಜಕೀಯ ಕಾರಣಗಳನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಅವರ ವಿಚಾರಣೆ ನಡೆಸಲಾಗುತ್ತಿದೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

