ಮೈಸೂರು ಅರಮನೆ ಸೌಂದರ್ಯಕ್ಕೆ ಮನಸೋತ ಮೋದಿ

ಮೈಸೂರು: ಮೈಸೂರು‌ ಅರಮನೆಯ ಅಂದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮನಸೋತರು.

ಮೈಸೂರು ಅರಮನೆಯಲ್ಲಿ  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷವಾಗಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಮೈಸೂರು ಅರಮನೆಗೆ ಬಂದ ನರೇಂದ್ರ ಮೋದಿ ಅವರಿಗೆ ಕಲ್ಯಾಣ ಮಂಟಪದಲ್ಲಿ ಯದುವೀರ್, ತ್ರಿಷಿಕಾ ಕುಮಾರಿ, ಪ್ರಮೋದಾ ದೇವಿ ಒಡೆಯರ್ ಅವರು ಸ್ವಾಗತ ಕೋರಿದರು.

ತರುವಾಯ ಮೋದಿ ಹಾಗೂ ಪ್ರಮೊದಾ ದೇವಿ ಒಡೆಯರ್ ಅವರು ಮಾತುಕತೆ ನಡೆಸಿದರು.

ವಿಶಾಲವಾದ ಡೈನಿಂಗ್ ಟೇಬಲ್ ನಲ್ಲಿ ಬೆಳ್ಳಿ ತಟ್ಟೆಯಲ್ಲಿ ನರೇಂದ್ರ ಮೋದಿ ಅವರಿಗೆ ಉಪಹಾರ ಬಡಿಸಲಾಯಿತು.

ಉಪ್ಪಿಟ್ಟು, ಅವಲಕ್ಕಿ, ಇಡ್ಲಿ ಸಾಂಬಾರ್, ಚಟ್ನಿ, ಮಿಕ್ಸ್ ಫ್ರೂಟ್, ಬ್ರೆಡ್ ಬಟರ್, ಮೈಸೂರು ಪಾಕ್ ಸೇರಿದಂತೆ ದಕ್ಷಿಣ ಭಾರತದ ತಿಂಡಿ ತಿನಿಸುಗಳನ್ನು ನರೇಂದ್ರ ಮೋದಿ ಅವರಿಗೆ ಉಣಬಡಿಸಿದುದು ವಿಶೇಷವಾಗಿತ್ತು.

ಮೈಸೂರು ರಾಜವಂಶಸ್ಥರ ಮಾಲೀಕತ್ವದ ಫರ್ನ್ ಹಿಲ್ ಪ್ಯಾಲೇಸ್ ಹಾಗೂ ರಿಜೆನ್ಸಿ ವಿಲ್ಲಾದಿಂದ ಬಂದಿದ್ದ ಬಾಣಸಿಗರು ನರೇಂದ್ರ ಮೋದಿ ಅವರಿಗಾಗಿ ರುಚಿ ರುಚಿಯಾದ ತಿಂಡಿ ತಿನಿಸುಗಳನ್ನು ತಯಾರಿಸಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಾಹಾರದಲ್ಲಿ ಭಾಗಿಯಾಗಿದ್ದರು.

ಮೈಸೂರು ಅರಮನೆ ಒಂದು ಸುತ್ತು ಹಾಕಿ ವೀಕ್ಷಣೆ ಮಾಡಿದ ನರೇಂದ್ರ ಮೋದಿಯವರು ಮೈಸೂರು ಅರಮನೆಯ ಸೌಂದರ್ಯಕ್ಕೆ  ಮನಸೋತರು.

ಅರಮನೆಯ ಸೌಂದರ್ಯ ಅಂದಚಂದವನ್ನು ನರೇಂದ್ರ ಮೋದಿ ಮೆಚ್ಚಿ ಆನಂದ ವ್ಯಕ್ತಪಡಿಸಿದರು.