ಬೆಳಗಾವಿ: ಸಚಿವರಾದ ಮೇಲೆ ಇಷ್ಟು ದಿನ ತೆಪ್ಪಗಿದ್ದ ಉಮೇಶ್ ಕತ್ತಿ ಮತ್ತೆ ವರಸೆ ಶುರು ಮಾಡಿದ್ದಾರೆ.
2024ರ ಲೋಕಸಭೆ ಚುನಾವಣೆ ಬಳಿಕ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂದು ಆಹಾರ ಮತ್ತು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಸಚಿವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದು ನಿಶ್ಚಿತ ಎಂದು ತಿಳಿಸಿದರು.
2024 ರ ಲೋಕಸಭಾ ಚುನಾವಣೆ ನಂತರ ಕರ್ನಾಟಕ 2 ರಾಜ್ಯವಾಗಲಿದೆ. ದೇಶದಲ್ಲಿ 50 ಹೊಸ ರಾಜ್ಯಗಳಾಗಲಿದೆ, ಈ ಕುರಿತು ಚರ್ಚೆ ಈಗಾಗಲೇ ನಡೆಯುತ್ತಿದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದರು.
ಮಹಾರಾಷ್ಟ್ರದಲ್ಲಿ 3, ಉತ್ತರ ಪ್ರದೇಶದಲ್ಲಿ 4, ಕರ್ನಾಟಕದಲ್ಲಿ 2 ರಾಜ್ಯಗಳಾಗಲಿವೆ. ಉತ್ತರ ಕರ್ನಾಟಕ ರಾಜ್ಯವಾಗಲೇಬೇಕು ಎಂದು ಹೇಳಿದರು.
ಬೆಂಗಳೂರಲ್ಲಿ ಕುಡಿಯಲು ನೀರಿಲ್ಲ. ಬೆಂಗಳೂರು ಟ್ರಾಫಿಕ್ ಜಾಮ್ ಹೇಳತೀರದು. 10 ಕಿಮೀ ಹೋಗಲು 1 ತಾಸು ಬೇಕು. ನನ್ನ ಮನೆಯಿಂದ ವಿಧಾನಸೌಧಕ್ಕೆ ಹೋಗಲು ಒಂದೂವರೆ ಗಂಟೆ ಬೇಕು.
ನಡೆದುಕೊಂಡು ಹೋದರೆ ಅದಕ್ಕಿಂತ ಬೇಗ ಹೋಗಬಹುದು. ಸದ್ಯ ಬೆಳಗಾವಿಯಲ್ಲಿ ವಿಧಾನಸೌಧ ಆಗಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಹೈಕೋರ್ಟ್ ಆಗಿದೆ. ಕಿತ್ತೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಚರ್ಚೆ ನಡೆದಿದೆ. ಹಾಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲು ಎಲ್ಲ ಸೌಲಭ್ಯಗಳಿವೆ ಎಂದು ಕತ್ತಿ ತಿಳಿಸಿದರು.

