ಬೆಂಗಳೂರು: ಆಪರೇಷನ್ ಕಮಲ ಬಿಜೆಪಿಯವರ ಅನಿಷ್ಟ ಕೂಸು, ಮಹಾರಾಷ್ಟ್ರದಲ್ಲಿ ಆ ಪಕ್ಷ ಹೀನ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮತ್ತೆ ಕೊಳಕು ರಾಜಕೀಯ ಶುರು ಮಾಡಿರುವ ಬಿಜೆಪಿ ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬರುವ ಯತ್ನ ಮಾಡುತ್ತಿದೆ ಎಂದು ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶ, ಕರ್ನಾಟಕದಲ್ಲಿ ಈಗಾಗಲೇ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಿರುವ ಬಿಜೆಪಿ ಈಗ ಮಹಾರಾಷ್ಟ್ರದಲ್ಲೂ ಹೀನ ರಾಜಕಾರಣ ಮಾಡುತ್ತಿದೆ.ಅವರ ವರ್ತನೆ ಸಂವಿಧಾನ ಬಾಹಿರ ಎಂದು ದೂರಿದ್ದಾರೆ.
ನಾ ಖಾವೂಂಗಾ, ನಾ ಖಾನೇ ದೂಂಗಾ ಎಂದು ಬೊಗಳೆ ಭಾಷಣ ಬಿಗಿಯುವ ಮೋದಿಯವರು, ಆಪರೇಷನ್ ಕಮಲಕ್ಕೆ ಸುರಿಯುವ ಸಾವಿರಾರು ಕೋಟಿ ಹಣ ಯಾರು ತಿಂದು ವಿಸರ್ಜಿಸಿದ್ದು ಎಂದು ಹೇಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಮೋದಿಯವರು ಪ್ರಾಮಾಣಿಕರಾಗಿದ್ದರೆ ಮಹಾರಾಷ್ಟ್ರದಲ್ಲಿ ಈಗ ನಡೆಯುತ್ತಿರುವ ಆಪರೇಷನ್ ಕಮಲದಲ್ಲಿ ಕೈ ಬದಲಾಗುವ ಹಣದ ಮೂಲದ ಬಗ್ಗೆ ಇಡಿ ತನಿಖೆಗೆ ಆದೇಶಿಸಿಯಾರೆ ಎಂದು ಕೇಳಿದ್ದಾರೆ.
ಆಪರೇಷನ್ ಕಮಲದ ಜನಕ ಯಡಿಯೂರಪ್ಪನವರು. ಬಿಎಸ್‍ವೈ ಸೃಷ್ಟಿಸಿದ ಪಿಡುಗನ್ನು ಇಂದು ದೇಶಾದ್ಯಂತ ಬಿಜೆಪಿಯವರು ಹಬ್ಬಿಸಿ ರಾಜಕೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದಾರೆ. ಇಂತಹ ಪಿಡುಗಿಗೆ ಜನರೇ ಕಡಿವಾಣ ಹಾಕಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

