ವಿದ್ಯುತ್ ದರ ಏರಿಕೆ ಮಾಡಿದರೆ ಜನಾಂದೋಲನ; ಎಚ್ ಡಿ ಕೆ ಎಚ್ಚರಿಕೆ

ಬೆಂಗಳೂರು: ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆ ಮಾಡಬಾರದು. ಒಂದು ವೇಳೆ ಏರಿಕೆ ಮಾಡಿದರೆ ಜನರನ್ನು ಒಗ್ಗೂಡಿಸಿ  ಜನಾಂದೋಲನ‌ ಮಾಡಬೇಕಾಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಗ್ರಾಮೀಣ ಪ್ರದೇಶಕ್ಕೆ ಗುಣಮಟ್ಟದ, ನಿಯಮಿತ ವಿದ್ಯುತ್ ಪೂರೈಕೆ ಮಾಡದ ಸರ್ಕಾರಕ್ಕೆ ದರ ಏರಿಕೆ ಮಾಡುವ ನೈತಿಕ ಹಕ್ಕಿಲ್ಲ ಎಂದು ಹೇಳಿದ್ದಾರೆ.

ಬೆಲೆ ಏರಿಕೆ ಬರೆ ಎಳೆಯುವಲ್ಲಿ ಬಿಜೆಪಿ ಸರ್ಕಾರದ್ದು ಸಾರ್ವಕಾಲಿಕ ದಾಖಲೆ. ಏಪ್ರಿಲ್ ಒಂದರಂದು ವಿದ್ಯುತ್ ದರ ಏರಿಸಿ ಜನರಿಗೆ ಶಾಕ್ ನೀಡಿದ್ದ ಸರ್ಕಾರ, ಈಗ ಮತ್ತೆ ವಿದ್ಯುತ್ ಬರೆ ಎಳೆಯಲು ಹೊರಟಿದೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಎಲ್ಲ ಜಲಾಶಯಗಳು ಭರ್ತಿಯಾಗಿವೆ. ವಿದ್ಯುತ್ ಉತ್ಪಾದನೆ ಚೆನ್ನಾಗಿದೆ. ಹೆಚ್ಚುವರಿ ವಿದ್ಯುತ್ ಇದೆ ಎಂದು ಸರ್ಕಾರವೇ ಹೇಳುತ್ತಿದೆ.ಆದರೂ ದರ ಏರಿಕೆಯ ಹಿಂದಿನ ಹುನ್ನಾರ ಏನು ಎಂದು ಪ್ರಶ್ನಿಸಿದ್ದಾರೆ.

ಮಾಸಿಕ 100 ಯೂನಿಟ್  ಬಳಸುವ ಗ್ರಾಹಕರು ಹೆಚ್ಚು ಬೆಲೆ ತೆರಬೇಕು. ಅಂದರೆ, ಬಡವರು ಮತ್ತು ಮಧ್ಯಮ ವರ್ಗದ ಜನರು ವಿದ್ಯುತ್ ಬಳಸದೇ ಕತ್ತಲಲ್ಲಿ ಕೊಳೆಯಬೇಕೆ? ಗತಿಶಕ್ತಿ ಯೋಜನೆ ಮೂಲಕ ದೇಶಕ್ಕೆ ಹೊಸ ಗತಿ ಕಾಣಿಸುವುದು ಎಂದರೆ ಇದೇ ಏನು ಎಂದು ಎಚ್‌ ಡಿ ಕೆ  ವ್ಯಂಗ್ಯವಾಡಿದ್ದಾರೆ.

ಇಂಧನ ಇಲಾಖೆಯ ಅಸಮರ್ಪಕ ನಿರ್ವಹಣೆ ಹಾಗೂ ವಿದ್ಯುತ್ ಸೋರಿಕೆಯನ್ನು ತಡೆಯಲಾಗದೆ ಇರುವುದು ಜನಕ್ಕೆ ಗೊತ್ತಿದೆ. ಆ  ಹೊರೆಯನ್ನು ಜನರ ಮೇಲೆ ಹೇರಿ ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನರನ್ನು ಮತ್ತಷ್ಟು ಸುಲಿಗೆ ಮಾಡುವ ‌ಹು ನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.