ಮುಂಬೈ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ವಿಶ್ವಾಸಮತ ಪರೀಕ್ಷೆಗೆ ಸಮಯ ಫಿಕ್ಸ್ ಆಗಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಗುರುವಾರ ಬೆಳಗ್ಗೆ 11 ಗಂಟೆಗೆ ವಿಶೇಷ ಅಧಿವೇಶನ ಕರೆದು ವಿಶ್ವಾಸಮತ ಯಾಚನೆ ಸಭೆ ನಡೆಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಶಾಸಕಾಂಗ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಕಳೆದ ವಾರದಿಂದ ಶಿವಸೇನೆ ಪಕ್ಷದ ಬಹುಪಾಲು ಶಾಸಕರು ಹಾಗೂ ಸ್ವತಂತ್ರ ಶಾಸಕರೊಂದಿಗೆ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಹಿರಿಯ ಸಚಿವ ಏಕನಾಥ್ ಶಿಂಧೆ ತಂಡ ಗುರುವಾರ ಮುಂಬೈಗೆ ಬರಲಿದೆ.
ಆಡಳಿತಾರೂಢ ಶಿವಸೇನೆಯಲ್ಲಿ ಬಂಡಾಯ ಉಂಟಾಗಿದ್ದು ಉದ್ದವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರ ಈಗ ಇಕ್ಕಟ್ಟಿನಲ್ಲಿ ಸಿಲುಕಿದೆ.
ಜೂನ್ 30 ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವಾಸ ಮತದ ಏಕೈಕ ಕಾರ್ಯಸೂಚಿಯೊಂದಿಗೆ ಕಲಾಪ ನಡೆಯಲಿದ್ದು ಸಂಜೆ 5 ಗಂಟೆಯೊಳಗೆ ಮುಕ್ತಾಯಗೊಳ್ಳುವಂತೆ ತಿಳಿಸಲಾಗಿದೆ.
ಸೊದನದ ಕಲಾಪಗಳನ್ನು ನೇರ ಪ್ರಸಾರ ಮಾಡಬೇಕು ಮತ್ತು ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಪತ್ರದಲ್ಲಿ ರಾಜ್ಯಪಾಲರು ತಿಳಿಸಿದ್ದಾರೆ.
ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ತಡರಾತ್ರಿ ರಾಜ್ಯಪಾಲರನ್ನು ಭೇಟಿಯಾಗಿ ಠಾಕ್ರೆ ನೇತೃತ್ವದ ಸರ್ಕಾರವು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಮನವಿ ಮಾಡಿದ್ದರು.
ಒಟ್ಟಾರೆ ಗುರುವಾರ ಮಹಾ ಅಘಾಡಿ ಸರ್ಕಾರದ ಅಳಿವು ಉಳಿವು ನಿರ್ಧಾರವಾಗುತ್ತದೆ.

