ಬೆಂಗಳೂರು: ರಾಜಸ್ಥಾನದಲ್ಲಿ ಮುಗ್ಧ ಟೈಲರ್ ಶಿರಚ್ಛೇದ ಮಾಡಿರುವ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಂಡಿಸಿದ್ದಾರೆ.
ಇದು ಅತ್ಯಂತ ಹೇಯ ಕೃತ್ಯ ಕೊಲೆಪಾತಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೊಲೆಯಾದ ಕನ್ಹಯ್ಯ ಲಾಲ್ ಅವರ ಕುಟುಂಬದ ಜತೆ ನಾವೆಲ್ಲರೂ ನಿಲ್ಲಬೇಕಿದೆ ಎಂದು ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಮುಗ್ಧ ಟೈಲರ್ ಶಿರಚ್ಛೇದ ಮಾಡಿರುವ ಘಟನೆ ನನಗೆ ತೀವ್ರ ಘಾಸಿ ಉಂಟು ಮಾಡಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪೈಶಾಚಿಕ ಕೃತ್ಯ. ಹಿಂಸೆ ಯಾವುದಕ್ಕೂ ಉತ್ತರವಲ್ಲ, ಪರಿಹಾರವೂ ಅಲ್ಲ. ಯಾವ ಧರ್ಮವೂ ಹಿಂಸೆಯನ್ನು ಒಪ್ಪುವುದೂ ಇಲ್ಲ ಎಂದಿದ್ದಾರೆ.
ಕನ್ಹಯ್ಯ ಲಾಲ್ ಅವರ ಕಿರಾತಕ ಹತ್ಯೆಯನ್ನು ಪಕ್ಷಾತೀತವಾಗ ಖಂಡಿಸಲೇಬೇಕು. ಆ ಪಾತಕಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸಬೇಕು. ಮತ್ತೊಮ್ಮೆ ಇಂಥ ಘಟನೆಗಳು ಮರುಕಳಿಸಲೇಬಾರದು ಎಂದಿದ್ದಾರೆ.
ಕನ್ಹಯ್ಯ ಅವರಿಗಾಗಿ ಇಡೀ ಭಾರತ ಕಣ್ಣೀರಿಡುತ್ತಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಎಚ್ ಡಿ ಕೆ ಹೇಳಿದ್ದಾರೆ.

