ಪಿ ಎಸ್ ಐ ನೇಮಕಾತಿ ಪರೀಕ್ಷಾ ಅಕ್ರಮ: ವಿಜಯೇಂದ್ರ ಭಾಗಿ -ಸಿದ್ದು ಸ್ಫೋಟಕ ಆರೋಪ

ಬೆಂಗಳೂರು: ಪಿ ಎಸ್ ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಪುತ್ರ ಭಾಗಿಯಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೋಟಕ ಆರೋಪ ಮಾಡಿದ್ದಾರೆ.

ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪಿ ಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣವನ್ನು ತಕ್ಷಣ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಿಎಂ ಎಂದ ಕೂಡಲೇ ಮಾಧ್ಯಮ ಪ್ರತಿನಿಧಿಗಳು ಎಷ್ಟೋಂದು ಜನ ಮಾಜಿ ಸಿಎಂ ಇದ್ದಾರೆ ಹೆಸರು ಹೇಳಿಬಿಡಿ ಎಂದಾಗ ಸಿದ್ದರಾಮಯ್ಯ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಎಂದು ಹೆಸರು ಹೇಳಿದರು.

ಕೇವಲ ವಿಜಯೇಂದ್ರ ಅಷ್ಟೇ ಅಲ್ಲ ಸಚಿವ ಡಾ.ಅಶ್ವಥ್ ನಾರಾಯಣ್ ಮೇಲೂ ಆರೋಪ ಇದೆ. ಇನ್ನೂ ಯಾರು ಇದ್ದಾರೋ ಒಟ್ಟಿನಲ್ಲಿ ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ಒತ್ತಾಯಿಸಿದರು.

ವಿಜಯೇಂದ್ರ ಜೇಬಿಗೆ ಹಣ ಹೋಗಿದೆಯಾ ಅಂತ ಗೊತ್ತಿಲ್ಲ, ಸತ್ಯ ಹೊರ ಬರಲಿ, ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಹೇಳಿದರು.

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದರು.

ಡಿಸಿ ಕೇಸಲ್ಲಿ ಜಡ್ಜ್ ಗೇ ಬೆದರಿಕೆ ಹಾಕಿದ್ದಾರೆ. ಆದರೆ ಅವರು ಹೆದರಿಲ್ಲ ಇದನ್ನ ಅವರೇ ಹೇಳಿದ್ದಾರೆ. ಇದು ಆಡಳಿತ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನ ತೋರಿಸುತ್ತದೆ ಎಂದು ಸಿದ್ದು ಖಾರವಾಗಿ ನುಡಿದರು.

ರಾಜ್ಯ ಸರ್ಕಾರ ವಜಾಕ್ಕೆ ಡಿಕೆಶಿ ಆಗ್ರಹ: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಹಾಗೂ ರಾಜ್ಯಸರ್ಕಾವನ್ನು ವಜಾ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

ಪಿಎಸ್ ಐ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನಕ್ಕೆ ಸಂಬಂಧಿಸಿದಂತೆ ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಪಿಎಸ್ ಐ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ರನ್ನ ಬಂಧಿಸಿದ್ದಾರೆ. ಕರ್ನಾಟಕಕ್ಕೆ ಇದು ಕಪ್ಪು ಚುಕ್ಕೆಯಾಗಿದೆ ರಾಜ್ಯದ ಆಡಳಿತಕ್ಕೆ ಇದು ಮಸಿ ಬಳಿದಿದೆ ಎಂದು ಹೇಳಿದರು.

ರಾಹುಲ್ ಗಾಂಧಿಯನ್ನ ಗಂಟೆಗಟ್ಟಲೇ ವಿಚಾರಣೆ ಮಾಡಿಸುತ್ತೀರಿ. ಆದರೆ ಅಧಿಕಾರಿಯನ್ನ ಎರಡು ಗಂಟೆಗಳ ಕಾಲ ಮಾತ್ರ ವಿಚಾರಣೆ ನಡೆಸಿದ್ದಾರೆ ಎಂದು ಕಿಡಿಕಾರಿದರು.

ಸಿಎಂ, ಗೃಹ ಸಚಿವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಡಿ.ಕೆ ಶಿವಕುಮಾರ್ ಒತ್ತಾಯಿಸಿದರು.