ಬೆಂಗಳೂರು: ಶಾಸಕ ಜಮೀರ್ ಅಹಮದ್ ಖಾನ್ ಅವರಿಗೆ ಮಂಗಳವಾರ ಬೆಳ್ಳಂಬೆಳಿಗ್ಗೆ ಎಸಿಬಿ ಶಾಕ್ ನೀಡಿದೆ.
ರೈಲ್ವೆ ಕಂಟೋನ್‌ಮೆಂಟ್ ಬಳಿ ಇರುವ ಜಮೀರ್ ಗೆ ಸೇರಿದ ಮನೆ,ಚಾಮರಾಜಪೇಟೆಯಲ್ಲಿರುವ ಮನೆ ಮೇಲೆ ದಾಳಿ ಮಾಡಲಾಗಿದೆ.
ನಂತರ ಕಲಾಸಿಪಾಳ್ಯದಲ್ಲಿ ಇರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸಿಲ್ವರ್ ಓಕ್ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲಾಟ್, ಸದಾಶಿವನಗರದಲ್ಲಿರುವ ಗೆಸ್ಟ್‌ಹೌಸ್ ಮತ್ತು ಬನಶಂಕರಿಯಲ್ಲಿರುವ ಜಿ.ಕೆ ಅಸೋಸಿಯೇಟ್ಸ್ ಕಚೇರಿ ಮೇಲೆ 40 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ದಾಳಿ ವೇಳೆ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಜಾರಿ ನಿರ್ದೇಶನಾಲಯದ ವರದಿ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶಾಸಕ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿಕೊಂಡಿದ್ದು ಮಂಗಳವಾರ ಬೆಳಿಗ್ಗೆ ಒಮ್ಮೆಗೆ ದಾಳಿ ಮಾಡಿ ಆಘಾತ ನೀಡಿದ್ದಾರೆ.

