ತುಮಕೂರು: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯನವರು ಸಿಐಡಿ ತಂಡವನ್ನು ಅಭಿನಂದಿಸಬೇಕಿತ್ತು ಆದರೆ ಅವರು ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಹಾಗೂ ವಿಜಯೇಂದ್ರರವರ ಹೆಸರನ್ನು ಸಿದ್ದರಾಮಯ್ಯ ಅವರು ಯಾವುದೇ ದಾಖಲಾತಿ ಇಲ್ಲದೆ ಹೇಳುವ ಮೂಲಕ ಅವರ ಚಾರಿತ್ರ್ಯ ಹರಣ ಮಾಡಿ ದೊಡ್ಡವರಾಗಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಸಾಕ್ಷ್ಯಾಧಾರ ಇದ್ದರೆ ಕೊಡಿ, ನೀವು ಸಾಕ್ಷ್ಯಾಧಾರ ಕೊಟ್ಟರೂ ನಾವು ಕ್ರಮ ಕೈಗೊಳ್ಳದಿದ್ದರೆ ಆಮೇಲೆ ಮಾತನಾಡಿ. ಸುಖಾ ಸುಮ್ಮನೆ ಈ ರೀತಿ ಆಧಾರ ರಹಿತ ಆರೋಪ ಮಾಡಬೇಡಿ ಎಂದು ಸಿದ್ದರಾಮಯ್ಯ ಅವರಿಗೆ ಸೂಚ್ಯವಾಗಿ ಆರಗ ಹೇಳಿದರು.
ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಗುಲ್ಬರ್ಗಾದಲ್ಲಿ ಕಾಂಗ್ರೆಸ್ ಮುಖಂಡ ಆರ್.ಡಿ. ಪಾಟೀಲ್ ಎಂಬುವರನ್ನು ಮೊದಲು ಬಂಧಿಸಿದ್ದು. ಆತನೇ ಈ ಪ್ರಕರಣದ ಕಿಂಗ್ ಪಿನ್ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಆಗಲೂ ಎಡಿಜಿಪಿ ಕೇಡರ್ ಅಧಿಕಾರಿಗಳ ಕೈಚಳಕ ಇತ್ತು ಎಂಬ ಬಗ್ಗೆ ಸಾಬೀತಾಗಿತ್ತು.ಆಗಲೂ ಎಫ್ಐಆರ್ ದಾಖಲಿಸಿತ್ತು. ಆದರೆ ಚಾರ್ಜ್ ಶೀಟ್ ಹಾಕದೆ ಸಗಣಿ ಸಾರಿಸುವ ಕೆಲಸ ಮಾಡಿದ್ದರು ಎಂದು ಟೀಕಿಸಿದರು.
ಆದರೆ ನಾವು ಅವರಂತೆ ಸಗಣಿ ಸಾರಿಸುವ ಕೆಲಸ ಮಾಡದೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ. ಹಾಗಾಗಿ ಕಾಂಗ್ರೆಸ್‌ನವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಸಚಿವರು ತಿರುಗೇಟು ನೀಡಿದರು.
ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯನ್ನು ಅವರ ಹಳೇ ಉದ್ಯೋಗಿಗಳೇ ಹತ್ಯೆ ಮಾಡಿದ್ದಾರೆ. ಇದೊಂದು ಅಮಾನುಷ್ಯ ಕೃತ್ಯ ಎಂದು ಇದೇವೇಳೆ ಅರಗ ಜ್ಞಾನೇಂದ್ರ ತಿಳಿಸಿದರು.
ಆರೋಪಿಗಳ ವಿಚಾರಣೆ ಮುಂದುವರೆದಿದೆ, ಚಂದ್ರಶೇಖರ ಗುರೂಜಿ ತಮ್ಮ ಸಂಸ್ಥೆಯಿಂದ ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ಅದೇ ದ್ವೇಷದಿಂದ ಬಂದು ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ ಎಂದು ಹೇಳಿದರು.
ದೊಡ್ಡ ಸ್ಟಾರ್ ಹೋಟೆಲ್‌ನಲ್ಲಿ ಭದ್ರತಾ ವ್ಯವಸ್ಥೆ ಇರಬೇಕಿತ್ತು. ಆದರೆ ಏಕೆ ಭದ್ರತಾ ಲೋಪವಾಗಿದೆ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ನಮ್ಮ ಪೊಲೀಸರು ಘಟನೆ ನಡೆದ 2 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗಾಗಿ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿದರು.

