ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣ ಸಂಬಂಧ ಯಾವುದೇ ದಾಖಲೆಗಳಿಲ್ಲದೆ ಗಾಳಿಯಲ್ಲಿ ಗುಂಡು ಹೊಡೆದಂತೆ ಸಿದ್ದರಾಮಯ್ಯ ಆರೋಪಿಸಿ ಪೆದ್ದರಾಮಯ್ಯ ರಂತೆ ವರ್ತಿಸುತ್ತಿದ್ದಾರೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ಕಿಡಿಕಾರಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ಸಂಖ್ಯೆಯಲ್ಲಿ ರಾಜ್ಯದ ಬಜೆಟ್ ಮಂಡಿಸಿದವರು.
ಆದರೆ ಅವರು ದಾಖಲೆಗಳಿಲ್ಲದೆಯೇ ಇಲ್ಲಸಲ್ಲದ ಆಪಾದನೆಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಮಟ್ಟವನ್ನು ತಾವೇ ಇಳಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಎಲ್ಲರ ಕೈಗಳೂ ತನ್ನ ಕೈಗಳಂತೆಯೇ ಕೊಳಕು ಎಂದುಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾತಿಗೆ ಸಿದ್ದರಾಮಯ್ಯ ಗೋಣು ಹಾಕುತ್ತಿದ್ದಾರೆ.
ಒಂದು ಸುಳ್ಳನ್ನು ನೂರು ಸಲ ಹೇಳಿದರೆ ಅದನ್ನು ಸತ್ಯವಾಗಿಸಬಹುದು ಎಂಬ ಭ್ರಮೆ ಸಿದ್ದರಾಮಯ್ಯ ಅವರನ್ನು ಆವರಿಸಿಕೊಂಡಿದೆ ಎಂದು ಅಶ್ವಥ್ ನಾರಾಯಣ ವ್ಯಂಗ್ಯ ವಾಡಿದರು.
ಲೋಕಾಯುಕ್ತದ ಕೈ ಕಟ್ಟಿ ಅದನ್ನು ನೀರಿಗೆ ಬಿಟ್ಟ ಕುಖ್ಯಾತಿ ಸಿದ್ದರಾಮಯ್ಯ ಅವರಿಗೆ ತಳುಕು ಹಾಕಿಕೊಂಡಿದೆ. ಅವರು ಅರ್ಕಾವತಿ ಹಗರಣದ ಪಿತಾಮಹ ಆಗಿದ್ದಾರೆ. ಸಿದ್ದರಾಮಯ್ಯ ಅವರು ಸುಳ್ಳುಗಳ ಸರಮಾಲೆ ಹೆಣೆಯುವುದರಲ್ಲಿ ಸಿದ್ಧಹಸ್ತರು ಎಂದು ಸಚಿವರು ಟೀಕಾಪ್ರಹಾರ ನಡೆಸಿದರು.

