ಬೆಂಗಳೂರು: ಸಮಾಜವಾದಿಯಂತೆ ಪೋಸು ಕೊಡುವ ಸಿದ್ದರಾಮಯ್ಯ 70 ಲಕ್ಷ ರೂ ಬೆಲೆಯ ಹ್ಯೂಬ್ಲೊ ಕೈಗಡಿಯಾರ ಕಟ್ಟಿಕೊಂಡಿದ್ದರು. ಆಮದು ಸುಂಕ ಪಾವತಿಸದೆ ತೆರಿಗೆ ವಂಚಿಸಿದ್ದರು ಎಂದು ಬಿಜೆಪಿ ಸಿದ್ದುಗೆ ಕುಟುಕಿದೆ.
ಆ ಗಡಿಯಾರದಲ್ಲಿ ಅಲಾರಾಂ ಜಾಸ್ತಿ ಬಡಿದಿದ್ದರಿಂದ ಕೊನೆಗೆ ಓಡೋಡಿ ಹೋಗಿ ಆಮದು ಸುಂಕ ಪಾವತಿಸಿದವರು. ಈಗ ನೀತಿಪಾಠ ಮಾಡೋದು ನೋಡಿದರೆ ಭೂತ ಭಗವದ್ಗೀತೆ ನುಡಿದ ಹಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಹೀಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿರುವ ಬಿಜೆಪಿ,ಸಿದ್ದರಾಮಯ್ಯರದು ಸ್ಪ್ಲಿಟ್ ಪರ್ಸನಾಲಿಟಿ ಎಂದು ಹೇಳಿದೆ.
ಪಕ್ಷದ ಪ್ರಣಾಳಿಕೆಯಲ್ಲಿ ಭಾಗ್ಯಗಳ ಪುಂಗಿ ಊದಿ ಆಶ್ವಾಸನೆ ಕೊಟ್ಟ ಧನರಾಶಿಯೇ ಬೇರೆ, ಸಮ್ಮಿಶ್ರ ಸರ್ಕಾರದ ಬಜೆಟ್ಟಿನಲ್ಲಿ ಆ ಭಾಗ್ಯಗಳಿಗೆ ಘೋಷಿಸಿದ ಪುಡಿಗಾಸು ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ.
ಇಷ್ಟೆಲ್ಲಾ ಆದ ಮೇಲೆ ಭಾಗ್ಯಗಳ ದುಡ್ಡನ್ನೂ ದೋಚಿದ್ದಾಯಿತು ಎಂದು ಕಿಡಿ ಕಾರಿದೆ.
ತಾನು ಬಹಳ ಸಚ್ಚಾರಿತ್ರ್ಯ ಎಂಬಂತೆ ಬಿಂಬಿಸಿಕೊಳ್ಳುವ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದೇನು ಎಂದು ಪ್ರಶ್ನಿಸಿದೆ.
ತಮ್ಮ ಮೇಲಿದ್ದ 50 ಪ್ರಕರಣಗಳಿಂದ ಪಾರಾಗಲು ಲೋಕಾಯುಕ್ತವನ್ನೇ ಖತಂ ಮಾಡಿದ ಭೂಪ ಈ ಮಹರಾಯ, ತಾನು ಕಳ್ಳ, ಪರರ ನಂಬ ಎಂದು ವ್ಯಂಗ್ಯವಾಡಿದೆ.
ಕೈಪಕ್ಷ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ. ಪಕ್ಷದ ಅಧ್ಯಕ್ಷೆಯಿಂದ ಹಿಡಿದು ಚಾಮರಾಜಪೇಟೆಯ ಪುಢಾರಿ ಶಾಸಕನವರೆಗೂ ಸಾಲುಸಾಲಾಗಿ ಇ.ಡಿ. ಹಿಡಿತದಲ್ಲಿದ್ದಾರೆ ಎಂದು ಕಟುವಾಗಿ ಬಿಜೆಪಿ ಟೀಕಿಸಿದೆ.

