ಚಾಮರಾಜಪೇಟೆ ಬಂದ್ ಯಶಸ್ವಿ

ಬೆಂಗಳೂರು: ಈದ್ಗಾ ಮೈದಾನ ಬಿಬಿಎಂಪಿ ಸ್ವತ್ತು ಎಂದು ಆಗ್ರಹಿಸಿ ಮಂಗಳವಾರ ಕರೆ ನೀಡಲಾಗಿದ್ದ ಚಾಮರಾಜಪೇಟೆ ಬಂದ್‌ ಯಶಸ್ವಿಯಾಗಿದೆ.

ಚಾಮರಾಜಪೇಟೆ ಸುತ್ತಮುತ್ತ ಅಂಗಡಿ – ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಜನಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ನಾವು ಕರೆ ನೀಡಿರುವ ಬಂದ್‌ಗೆ ಸ್ಥಳೀಯರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಚಾಮರಾಜಪೇಟೆ ನಾಗರೀಕರ ಒಕ್ಕೂಟ ವೇದಿಕೆಯ ಕಾರ್ಯದರ್ಶಿ ರುಕ್ಮಾಂಗದ ಮಾಧ್ಯಮ ಪ್ರತಿ ನಿಧಿಗಳಿಗೆ ತಿಳಿಸಿದರು.

ಈದ್ಗಾ ಮೈದಾನದ ಸುತ್ತಮುತ್ತ ಇರುವ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ತರಕಾರಿ, ಮೆಡಿಕಲ್ ಶಾಪ್‌ಗಳಿಗೆ ತೊಂದರೆಯಾಗಿಲ್ಲ.

ಬೆಳಿಗ್ಗೆ ಹಾಲು ಮಾರಾಟ ಮಾತ್ರ ಮಾಡಲಾಗಿತ್ತು.ಉಳಿದಂತೆ ಎಲ್ಲಾ ವಹಿವಾಟು ‌ಸ್ಥಗಿತವಾಗಿತ್ತು.

ಕೆಲ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕೆಲ ರಸ್ತೆಗಳಲ್ಲಿ ಆಟೋ ಮತ್ತಿತರ ವಾಹನಗಳ ಸಂಚಾರ ಕಂಡು ಬಂದವು.

ಚಾಮರಾಜಪೇಟೆ ಬಂದ್ ಯಶಸ್ವಿಯಾಗಿರುವುದರಿಂದ ನಾವು ಯಾವುದೇ ಪ್ರತಿಭಟನೆ ಮಾಡುವುದಿಲ್ಲ, ಜನರೇ ಸ್ವಯಂಪ್ರೇರಿತರಾಗಿ ಬಂದ್‌ಗೆ ಬೆಂಬಲ ನೀಡಿದ್ದಾರೆ ಒಂದೆರಡು ದಿನಗಳ ನಂತರ ಮತ್ತೆ ಬೈಕ್ ರ್ಯಾಲಿ ನಡೆಸುತ್ತೇವೆ ಎಂದು ರುಕ್ಮಾಯ ತಿಳಿಸಿದರು .

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಏಳು ವಾಡ್‌ರ್ಗಳಿದ್ದು ಬಂದ್ ಕೇವಲ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿತ್ತು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

ಬೂದಿ ಮುಚ್ಚಿದ ಕೆಂಡ : ಚಾಮರಾಜಪೇಟೆಯಲ್ಲಿ ಬಂದ್ ವೇಳೆ ಯಾವುದೇ ಪ್ರತಿಭಟನೆ ನಡೆದಿಲ್ಲ.

ಮೈದಾನ ನುಗ್ಗಲು ಯತ್ನಿಸಿದ ಕೆಲವರನ್ನು ಬಲವಂತವಾಗಿ ಹೊರ ಹಾಕಿರುವುದರಿಂದ ಸ್ಥಳದಲ್ಲಿ ಶಾಂತ ವಾತಾವರಣ ಇದ್ದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಪೊಲೀಸರು ಆಯಾಕಟ್ಟಿನ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಯಾವುದೇ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸಿದ್ದಾರೆ .