ಬೆಂಗಳೂರು: ನಿಮ್ಮ ಅಧಿಕಾರದ ದುರಾಸೆಗೆ ಕಾಂಗ್ರೆಸ್ಸಿನವರೇ ಆದ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಿದ ಕೀರ್ತಿ ನಿಮಗೆ ಸಲ್ಲುತ್ತದೆ ಎಂದು ಸಿದ್ದರಾಮಯ್ಯ ಅವರ ವಿರುದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವಿಟರ್ ವಾರ್ ಮಾಡಿದ್ದಾರೆ.
ಇದನ್ನು ಡಿ.ಕೆ.ಶಿವಕುಮಾರ್ ಅವರ ತಾಯಿಯೇ ಹೇಳಿದ್ದಾರೆ. ಅದನ್ನು ಮರೆತು ಸಿದ್ದರಾಮಯ್ಯನವರು, ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಗಿಸಿದರು ಎಂದು ಹೇಳುತ್ತಿದ್ದಾರೆ . ಅವರಲ್ಲಿ ನೈತಿಕತೆ ಉಳಿದಿದೆಯಾ ಎಂದು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲ ಸಿದ್ದರಾಮಯ್ಯನವರ ರಾಜಕೀಯ ನಡೆ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ ಜೋಶಿ.
ಒಳ ಸಂಚು ಮತ್ತು ಷಡ್ಯಂತ್ರವನ್ನೇ ವೃತ್ತಿ ಮತ್ತು ಪ್ರವೃತ್ತಿಯನ್ನಾಗಿಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಸಿದ್ದರಾಮಯ್ಯನವರಿಗೆ ತಾವು ಮಾಡಿದ ಕುತಂತ್ರಗಳೇ ಬೇರೆ ಪಕ್ಷಗಳಲ್ಲೂ ಇರಬಹುದು ಎಂದು ಭಾಸವಾಗುತ್ತಿದೆ.
ಏಕೆಂದರೆ ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ ಎಂದು ಟ್ವೀಟ್ ನಲ್ಲಿ ಕುಟುಕಿದ್ದಾರೆ.
ಸಿಎಂ ಆಗಿದ್ದ ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಲು ಕಾಂಗ್ರೆಸ್ ಪರಮೋಚ್ಛ ನಾಯಕಿ ಸೋನಿಯಾ ಗಾಂಧಿ ಯಾವ ರೀತಿ ಕಾರಣರಾದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ಇ.ಡಿ. ಮತ್ತು ಸಿಬಿಐ ಬಳಸಿ ಪಕ್ಷವನ್ನು ಒಡೆದು ನೀವು ಯಾವ ರೀತಿ ಮುಖ್ಯಮಂತ್ರಿಯಾದಿರಿ ಎಂಬುದನ್ನು ಮರೆತಿರಾ ಎಂದು ಜೋಷಿ ಅವರು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ .
ಸಿದ್ದರಾಮೋತ್ಸವದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅವನತಿಯಾಗಲಿದೆ ಎಂಬ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದರು.
ಮಲ್ಲಿಕಾರ್ಜುನ ಖರ್ಗೆ,ಜಿ.ಪರಮೇಶ್ವರ್ ರಂತವರನ್ನು ಮುಳುಗಿಸಿದ್ದಾಯಿತು ಈಗ ಡಿ.ಕೆ.ಶಿ ಸರದಿ, ಹಿರಿಯ ನಾಯಕರು ಕೂಡ ಸಿದ್ದರಾಮಯ್ಯನವರಿಂದ ಬೇಸತ್ತಿದ್ದಾರೆ,ಹಾಗಾದಲ್ಲಿ ಕಾಂಗ್ರೆಸ್ ನಾಶವಾಗಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಜೋಶಿ ವ್ಯಾಖ್ಯಾನಿಸಿದ್ದರು.
ಜೋಷಿಯವರ ಈ ಹೇಳಿಕೆಗೆ ಟ್ವಿಟರ್ ನಲ್ಲಿ ತಿರುಗೇಟು ನೀಡಿದ್ದ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೆಸರು ಉಲ್ಲೇಖಿಸಿ ಜೋಷಿ ಅವರ ಕಾಲೆಳೆದಿದ್ದರು.

