ಜನರ ಆಶೋತ್ತರಗಳಿಗೆ ಸ್ಪಂದಿಸುವುದೇ ನಿಜವಾದ ಪ್ರಜಾಪ್ರಭುತ್ವ -ಡಾ.ಕೆ.ಸುಧಾಕರ್

ಬೆಂಗಳೂರು: ಸಾಮಾನ್ಯ ಜನರ ಆಶೋತ್ತರಗಳಿಗೆ ಸಂವೇದನೆಯಿಂದ ಸ್ಪಂದಿಸಿ ಜನಪರ ಆಡಳಿತವನ್ನು ನೀಡುವುದೇ ನಿಜವಾದ ಪ್ರಜಾಪ್ರಭುತ್ವ ಎಂದು ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಕೇಂದ್ರ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದು ಕೊರತೆ ಸಚಿವಾಲಯ ಬೆಂಗಳೂರಿನಲ್ಲಿ ಆಯೋಜಿಸಿದ್ದ ಉತ್ತಮ ಆಡಳಿತಕ್ಕಾಗಿ ನಾಗರಿಕರು, ಉದ್ಯಮಿಗಳು ಮತ್ತು  ಸರ್ಕಾರದ ನಡುವಿನ ಸಮನ್ವಯತೆ ಗಾಗಿ ಪ್ರಾದೇಶಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ರಾಜಧರ್ಮ, ರಾಮರಾಜ್ಯ ಹಾಗೂ ಕಲ್ಯಾಣ ರಾಷ್ಟ್ರ ಎಂಬ ಪರಿಕಲ್ಪನೆಗಳ ಬಗ್ಗೆ ಭಾರತೀಯರಿಗೆ ತಿಳಿವಳಿಕೆ ಇದೆ. ಚಾಣಕ್ಯ ನೀತಿ, ಶುಕ್ರ ನೀತಿ ಸಾರ, ರಾಮಾಯಣ, ಮಹಾಭಾರತವನ್ನು ಭಾರತೀಯರು ಓದಿಕೊಂಡು ಬಂದಿದ್ದಾರೆ.

ಬೌದ್ಧ ಧರ್ಮೀಯರ ಕೃತಿಗಳಲ್ಲಿ ಕೂಡ ಉತ್ತಮ ಆಡಳಿತವೆಂದರೆ ಏನು ಮತ್ತು ಹೇಗೆ ನಡೆಸಬೇಕು ಎನ್ನುವುದನ್ನು ತಿಳಿಸಲಾಗಿದೆ. ಹೀಗಾಗಿ ಉತ್ತಮ ಆಡಳಿತದ ಬಗ್ಗೆ ಹಿಂದಿನಿಂದಲೂ  ಭಾರತೀಯರಿಗೆ ಅನುಭವ ಇದೆ ಎಂದು ಹೇಳಿದರು.

ರಾಜಧರ್ಮವು, ರಾಜನ ಆಡಳಿತದ ಉದ್ದೇಶ ಮತ್ತು ಅವರ ಮಂತ್ರಿಗಳ ಆಡಳಿತ ನೀತಿಯ ಬಗ್ಗೆ ತಿಳಿಸಿಕೊಡುತ್ತಿತ್ತು. ಕರ್ನಾಟಕವೂ ಆಡಳಿತ ನೀತಿಗೆ ಸಾಕಷ್ಟು ಕೊಡುಗೆ ಕೊಟ್ಟಿದೆ. ಎಂದರು.

12ನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರು ಸಮಾಜ ಸುಧಾರಕರಾಗಿ ಅನುಭವ ಮಂಟಪದ ಮೂಲಕ ನಿಜವಾದ ಪ್ರಜಾಪ್ರಭುತ್ವದ ಮಾದರಿಗೆ ಬುನಾದಿ ಹಾಕಿ ಕೊಟ್ಟಿದ್ದರು.

ಪ್ರಜಾಪ್ರಭುತ್ವದ ಬಗ್ಗೆ ಭಾರತ ಬೇರೆಲ್ಲೂ ನೋಡಬೇಕಿಲ್ಲ. ಭಾರತದ ಕಡೆ ಎಲ್ಲರೂ ನೋಡುವಂತಹ ಇತಿಹಾಸವಿದೆ ಎಂದು ಬಣ್ಣಿಸಿದರು.

ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವುದು ಕೆಲಸದ ಬಗ್ಗೆ ಸಾಕಷ್ಟು ತಿಳಿವಳಿಕೆ ನೀಡುತ್ತದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಇತ್ತೀಚೆಗೆ ಬಜೆಟ್‌ ಭಾಷಣದಲ್ಲಿ ಕಾಯಕವೇ ಕೈಲಾಸ ಎಂಬುದನ್ನು  ಪ್ರಸ್ತಾಪ ಮಾಡಿದ್ದರು.

ಉತ್ತಮ ಆಡಳಿತ ಎಂದರೆ, ಸಾಮಾನ್ಯ ಮನುಷ್ಯನಿಗೆ ಏನು ಅಗತ್ಯವಿದೆ, ಸಮಸ್ಯೆಗಳೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದನ್ನು ಸುಧಾರಿಸಲು ಕೈಗೊಳ್ಳುವ ಕ್ರಮವೇ ಆಗಿದೆ ಎಂದು ಸುಧಾಕರ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಆಡಳಿತ ಕ್ಷೇತ್ರದಲ್ಲಿ ರಾಜ ಋಷಿಯಾಗಿದ್ದಾರೆ. ಹೀಗಾಗಿ ಈಗ ಎಲ್ಲರೂ ಅವರನ್ನೇ ಹಿಂಬಾಲಿಸುತ್ತಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್‌ ತಳಿಸಿದರು.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಡಿಪಿಎಆರ್‌ ಪ್ರಧಾನ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.