ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ಸಹಸ್ರಾರು ಭಕ್ತರು ದೇವಿ ಚಾಮುಂಡೇಶ್ವರಿ ದರ್ಶನ ಪಡೆದರು.
ಬೆಳಿಗ್ಗೆ 3.30ರಿಂದಲೇ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತಭಿಷೇಕ, ಸಹಸ್ರ ನಾಮಾರ್ಚನೆ ಹಾಗೂ ಮಹಾಮಂಗಳಾರತಿಗಳು ನಡೆದವು.
ಬೆಳಿಗ್ಗೆ 5.30ರಿಂದ ಭಕ್ತರಿಗೆ ತಾಯಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಸರತಿ ಸಾಲಿನಲ್ಲೇ ತೆರಳಿ ಭಕ್ತರು ತಾಯಿಯ ದರ್ಶನವನ್ನು ಪಡೆಯಬೇಕು.
ಚಾಮುಂಡೇಶ್ವರಿ ದೇವಿ ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ,
ವಿವಿಧ ಬಗೆಯ ಹೂವಿನಿಂದ ದೇವಾಲಯದ ಒಳ ಆವರಣವನ್ನು ಸಿಂಗರಿಸಲಾಗಿದೆ.
ಕೆಲವು ಭಕ್ತರು ಮೆಟ್ಟಿಲಿನ ಮೂಲಕ ತೆರಳಿ ತಾಯಿಯ ದರ್ಶನ ಪಡೆದರು. ಮಳೆ ಅಷ್ಟಾಗಿ ಇರದ ಕಾರಣ ತಾಯಿಯ ದರ್ಶನಕ್ಕೆ ಭಕ್ತರಿಗೆ ಅನುಕೂಲವಾಯಿತು.
20ನೇ ತಾರೀಖು ಆಷಾಢ ಮಾಸದ ಕೃಷ್ಣಪಕ್ಷದ ಸಪ್ತಮಿ ರೇವತಿ ನಕ್ಷತ್ರದಂದು ಚಾಮುಂಡೇಶ್ವರಿ ದೇವಿ ವರ್ಧಂತಿ ಇರುವುದರಿಂದ ಬಹಳ ವಿಶೇಷವಾಗಿರುತ್ತದೆ ಎಂದು ಈ ವೇಳೆ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ತಿಳಿಸಿದರು.
ಅದಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಸೋಮವಾರ, ಮಂಗಳವಾರ ಸಾಯಂಕಾಲದಿಂದಲೇ ಆರಂಬಿಸುತ್ತೇವೆ. ಈ ಬಾರಿ ಚಿನ್ನದ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಹೇಳಿದರು.
ಕಳೆದೆರಡು ವರ್ಷಗಳಿಂದ ಕೊರೋನಾ ಕಾರಣಕ್ಕೆ ಉತ್ಸವ ಆಗಿರಲಿಲ್ಲ. ಈ ಬಾರಿ ಉತ್ಸವ ನಡೆಯಲಿದೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದರು.
ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನದಲ್ಲಿ ತೆರಳಲು ನೀಡಲಾಗಿದ್ದ ಪಾಸ್ ಗಳಿಂದ ಪೊಲೀಸರಿಗೆ ಕಿರಿಕಿರಿ ಹೆಚ್ಚಾದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳಲು ನೀಡಿದ್ದ ವಿಐಪಿ ಪಾಸ್ ನ್ನು ರದ್ದುಗೊಳಿಸಲಾಗಿದೆ.
ದೇವಿಯ ದರ್ಶನಕ್ಕೆ ಭಕ್ತರಿಗೆ ಸುಗಮ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಹೆಚ್ಚಿನ ವಾಹನಗಳು ಬೆಟ್ಟಕ್ಕೆ ಸಂಚರಿಸುವುದನ್ನು ತಪ್ಪಿಸಲು ಪಾಸ್ ರದ್ದು ಮಾಡಲಾಗಿದೆ.
ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿರುವುದರಿಂದ ಖಾಸಗಿ ವಾಹನಗಳ ಕಾರುಬಾರು ಇರಲಿಲ್ಲ.

