ಈಶ್ವರಪ್ಪ ತಲೆದಂಡಕ್ಕೆ ಕಾರಣವಾಗಿದ್ದ ಸಂತೋಷ್ ಆತ್ಮಹತ್ಯೆ: ಪಾರದರ್ಶಕ ತನಿಖೆಗೆ ರಾಜ್ಯಪಾಲರಿಗೆ ಪತ್ನಿ ಪತ್ರ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದ ಸೃಷ್ಟಿಸಿ ಸಚಿವ ಈಶ್ವರಪ್ಪ ತಲೆದಂಡಕ್ಕೆ ಕಾರಣವಾಗಿದ್ದ ಬೆಳಗಾವಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ರಾಜಭವನ ಅಂಗಳಕ್ಕೆ ಕಾಲಿಟ್ಟಿದೆ.

ಪ್ರಕರಣ ಕುರಿತಂತೆ ಪೊಲೀಸರಿಂದ ಸರಿಯಾದ ತನಿಖೆ ನಡೆಯುತ್ತಿಲ್ಲ ಎಂದು ಆರೋಪಿ ಸಂತೋಷ್ ಪತ್ನಿ , ರಾಜ್ಯಪಾಲ ತಾವರ್ ಚಂದ್ ಗೆಲ್ಲೋಟ್‌ ಅವರಿಗೆ ಪತ್ರ ಬರೆದು ಪಾರದರ್ಶಕ ತನಿಖೆ ನಡೆಸಬೇಕೆಂದು ಕೋರಿದ್ದಾರೆ.

ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ನಿರ್ದೇಶನದಂತೆ ತನಿಖೆ ನಡೆಯುತ್ತಿದೆ. ಕೇವಲ 15 ದಿನದಲ್ಲಿ ಈ ಪ್ರಕರಣದಲ್ಲಿ ಆರೋಪ ಮುಕ್ತನಾಗಿ ಬರುತ್ತೇನೆ ಎಂದು ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆ ಇದಕ್ಕೆ ಸಾಕ್ಷಿ ಎಂದು ರೇಣುಕಾ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಮೃತ ಸಂತೋಷ ಪತ್ನಿ ರೇಣುಕಾ ಪಾಟೀಲ್ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ತನಿಖೆಯ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಪ್ರಕರಣದ ಪ್ರತಿ ಹಂತದ ತನಿಖೆಯನ್ನೂ ಸೋರಿಕೆ ಮಾಡಿ ಈಶ್ವರಪ್ಪನವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಆಕೆ ಬರೆದಿದ್ದಾರೆ. ಈಶ್ವರಪ್ಪರ ಮಾತುಗಳನ್ನು ಗಮನಿಸಿದರೆ ಅವರ ನಿರ್ದೇಶನದಂತೆಯೇ ತನಿಖೆ ನಡೆಯುತ್ತಿದೆ ಎಂದೆನಿಸುತ್ತಿದೆ ಹೀಗಾಗಿ ನಿಷ್ಪಕ್ಷಪಾತ ವಾಗಿ ತನಿಖೆ ನಡೆಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.