ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಕೌಶಲ್ಯ ಎಲ್ಲರಿಗೂ ಸಿಗಲಿ -ಸಿಎಂ

ಬೆಂಗಳೂರು: ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಕೌಶಲ್ಯ  ಎಲ್ಲರಿಗೂ ಸಿಗುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯುವ ಕೌಶಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಕೌಶಲ್ಯಭರಿತ ರಾಜ್ಯವಾಗಬೇಕು ಎಂದು ಹೇಳಿದರು.

ಎಲ್ಲರಿಗೂ ಒಳಿತಾಗುವ ರೀತಿಯಲ್ಲಿ ಕೌಶಲ್ಯ ಅಭಿವೃದ್ಧಿಯಾಗಬೇಕು. ಯುವ ಸಮುದಾಯಕ್ಕೆ ಕೌಶಲ್ಯ ನೀಡಿದರೆ ಅದೇ ಶಕ್ತಿಯಾಗಲಿದೆ. ಮಾನವ ಸಂಪನ್ಮೂಲ ಸದ್ಬಳಕೆಯಾದಾಗ ದೇಶಕ್ಕೆ ಒಳ್ಳೆಯ ಭವಿಷ್ಯವಿದೆ ಎಂದರು.

ಈಗ ಕೌಶಲ್ಯ ವಿಜ್ಞಾನವೂ ಮುಂಚೂಣಿಗೆ ಬಂದಿದ್ದು, ದೇಶ ಕಟ್ಟಲು ಕೌಶಲ್ಯ ಬಹಳ ಮುಖ್ಯ  ಎಂದು ಬೊಮ್ಮಾಯಿ ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ ಗುಣಮಟ್ಟದ ಕೌಶಲ್ಯವುಳ್ಳ ಮಾನವ ಸಂಪನ್ಮೂಲದ ಅಗತ್ಯವಿದೆ. ಐಟಿಐ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಿದ್ದು, ಗುಣಮಟ್ಟದ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು