ಸರ್ಕಾರದ ಸುತ್ತೋಲೆಗಳಲ್ಲಿ ಕನ್ನಡ ಪದಗಳು ತಪ್ಪಾದರೆ ವೇತನ ಕಟ್…!

ಬೆಂಗಳೂರು: ಸರ್ಕಾರದ ಆದೇಶಗಳು ಅಥವಾ ಸುತ್ತೋಲೆಗಳನ್ನು ಕನ್ನಡದಲ್ಲಿ ಟೈಪಿಂಗ್ ಮಾಡುವಾಗ ಏನಾದರೂ ತಪ್ಪುಗಳಾದರೆ ಆ ನೌಕರರ ಸಂಬಳದಲ್ಲಿ ಕಡಿತವಾಗಲಿದೆ. ಜತೆಗೆ ಮುಂಬಡ್ತಿ ಕೂಡಾ ನಿರಾಕರಿಸಲಾಗುತ್ತದೆ.

ಕನ್ನಡದ ಸುತ್ತೋಲೆಗಳನ್ನು ತಪ್ಪು ತಪ್ಪಾಗಿ ಮುದ್ರಣ ಮಾಡುವ ಇಲ್ಲವೇ ವ್ಯಾಕರಣ ದೋಷ ಮಾಡುವವರ ಮೇಲೆ ಶಿಸ್ತು ಕ್ರಮ ಜರುಗಿಸಲು ಹಾಲಿ ಇರುವ ನಿಯಮಕ್ಕೆ ಕನ್ನಡ ಮತ್ತು ಸಂಸ್ಕತಿ ಇಲಾಖೆ ತಿದ್ದುಪಡಿ ಮಾಡಲು ಮುಂದಾಗಿದೆ.

ವಿಧಾನಮಂಡದಲ್ಲಿ ಹೊಸ ಕಾಯ್ದೆ ಜಾರಿಯಾಗಿ ಅನುಷ್ಠಾನಕ್ಕೆ ಬಂದರೆ  ಸರ್ಕಾರದ ಸುತ್ತೋಲೆಗಳಲ್ಲಿ ಕನ್ನಡವನ್ನು ಅಪಮಾನಿಸಿದರೆ ಅಂಥವರ ವೇತನ ಕಡಿತ , ಮುಂಬಡ್ತಿಗೆ ತಡೆ ಹಾಗೂ ಕೆಲವು ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂಬ ನಿಯಮಗಳನ್ನು ರೂಪಿಸಲಾಗುತ್ತಿದೆ.

ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವ ಸುನೀಲ್‌ಕುಮಾರ್ ಅವರು , ನಿಯಮಗಳಿಗೆ ತಿದ್ದುಪಡಿ ಮಾಡಿ ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲು ಅಗತ್ಯ ಸಿದ್ಧತೆಗಳನ್ನುಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ ಚಿತ್ರೀಕರಣ ಮತ್ತು ಪೋಟೋ ತೆಗೆಯುವ ಆದೇಶವನ್ನು ಕಳೆದ ಶುಕ್ರವಾರ ಸರ್ಕಾರ ಹೊರಡಿಸಿತ್ತು . ಸಾರ್ವಜನಿಕ ವಲಯದಲ್ಲಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ನಂತರ ತಡರಾತ್ರಿ ಹಿಂಪಡೆಯಲಾಯಿತು.

ಹಿಂಪಡೆದ ಆದೇಶದಲ್ಲಿ ಸಾಕಷ್ಟು ಕಾಗುಣಿತ ದೋಷಗಳು ಕಂಡುಬಂದಿದ್ದವು,ಇದಕ್ಕೆ ತೀವ್ರ ಟೀಕೆಗಳು ವ್ಯಕ್ತವಾದ ನಂತರ ಅದನ್ನು ಹಿಂಪಡೆದು ಸರ್ಕಾರ ಹೊರಡಿಸಿದ ಹೊಸ ಆದೇಶದಲ್ಲಿ ಕರ್ನಾಟಕ ಸೇರಿದಂತೆ ಹಲವು ಪದಗಳಲ್ಲಿ ವ್ಯಾಕರಣ ದೋಷಗಳು ಕಂಡುಬಂದಿದ್ದವು.

ಇದರಿಂದಾಗಿ ಸರ್ಕಾರ ತೀವ್ರ ಮುಜುಗರಕ್ಕೆ ಸಿಲಿಕಿತು.

ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಚಿವ ಸುನೀಲ್‌ಕುಮಾರ್ ಸರ್ಕಾರಿ ಅಧಿಸೂಚನೆ ಇಲ್ಲವೇ ಕಡತಗಳಲ್ಲಿ ಕನ್ನಡವನ್ನೇ ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಈ ನಿಯಮವನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.