ರಾಷ್ಟ್ರಪತಿ ಚುನಾವಣೆಗೆ ಭರ್ಜರಿ ಮತದಾನ

ನವದೆಹಲಿ: ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಆಯ್ಕೆಗೆ ಭರ್ಜರಿ ಮತದಾನ ನಡೆಯಿತು.

ಎನ್‌ಡಿಎ ಬೆಂಬಲಿತ ಬಿಜೆಪಿ ಅಭ್ಯರ್ಥಿ ದೌಪದಿ ಮುರ್ಮು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ರಾಷ್ಟ್ರಪತಿ ಚುನಾವಣಾ ಕಣದಲ್ಲಿ ಎನ್‌ಡಿಎ ಅಭ್ಯರ್ಥಿ ದೌಪದಿ ಮುರ್ಮು ಹಾಗೂ ವಿರೋಧಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಯಶ್ವಂತ್ ಸಿನ್ಹಾ ಕಣದಲ್ಲಿದ್ದಾರೆ.

ಇವರಲ್ಲಿ ಮುರ್ಮು ಅವರಿಗೆ ಹೆಚ್ಚು ಮತಗಳು ಚಲಾವಣೆಯಾಗಿದ್ದು ಅವರ ಗೆಲುವು ನಿಶ್ಚಿತ.

ಸೋಮವಾರ ಸಂಸತ್ ಭವನದಲ್ಲಿ ನಡೆದ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ , ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಷಿ ಸೇರಿದಂತೆ ಬಿಜೆಪಿ ಹಾಗೂ ಅಂಗಪಕ್ಷಗಳ ಸಂಸದರು ಮತ್ತು ರಾಜ್ಯಸಭಾ ಸದಸ್ಯರು ತಮ್ಮ ಹಕ್ಕನ್ನು ಚಲಾಯಿಸಿದರು.

ಮುರ್ಮು ಅವರ ಮತಗಳ ಪ್ರಮಾಣವು ಈಗ 61 ಪ್ರತಿಶತವನ್ನು ಮೀರುವ ಸಾಧ್ಯತೆಯಿದೆ, ಎನ್‌ಡಿಎ ಅಭ್ಯರ್ಥಿಯು ವಿವಿಧ ಪ್ರಾದೇಶಿಕ ಪಕ್ಷಗಳ ಬೆಂಬಲದ ನಂತರ ಒಟ್ಟು 10,86,431 ಮತಗಳಲ್ಲಿ 6.67 ಲಕ್ಷಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದಾರೆ.

ಇವುಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ( ಬಿಜೆಪಿ ) ಮತ್ತು ಅದರ ಮಿತ್ರಪಕ್ಷಗಳ 3.08 ಲಕ್ಷ ಮತಗಳು ಸೇರಿವೆ.

ಬಿಜು ಜನತಾ ದಳ ( ಬಿಜೆಡಿ ) ಮತದಾರರಲ್ಲಿ ಸುಮಾರು 32,000 ಮತಗಳನ್ನು ಹೊಂದಿದೆ , ಇದು ಒಟ್ಟು ಮತಗಳ ಶೇ .2.9 ರಷ್ಟಿದೆ. ಮುರ್ಮು ಅವರು ಎಐಎಡಿಎಂಕೆ ( 17,200 ಮತಗಳು ) , ವೈಎಸ್ಆರ್ಸಿಪಿ ( ಸುಮಾರು 44,000 ಮತಗಳು ) , ತೆಲುಗು ದೇಶಂ ಪಕ್ಷ ( ಸುಮಾರು 6,500 ಮತಗಳು ), ಶಿವಸೇನೆ ( 25,000 ಮತಗಳು ) ಮತ್ತು ಜನತಾ ದಳ ( ಜಾತ್ಯತೀತ ) ( ಸುಮಾರು 5,600 ) ಮತಗಳ ಬೆಂಬಲವನ್ನು ಪಡೆದಿದ್ದಾರೆ.

ಇದು ಕೇವಲ ನಾಮಕಾವಸ್ತೆ ಚುನಾವಣೆ ಎಂಬಂತಾಗಿದೆ.

ದೌಪದಿ ಮುರ್ಮು ಅವರು ಮೂರನೇ ಎರಡರಷ್ಟು ಮತಗಳನ್ನು ತಲುಪುವ ಸಾಧ್ಯತೆಯಿದೆ ಹಾಗೂ ಅವರು ಬುಡಕಟ್ಟು ಸಮುದಾಯದಿಂದ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಯಶವಂತ್ ಸಿನ್ಹಾಗೆ ಕಾಂಗ್ರೆಸ್, ಟಿಎಂಸಿ, ಟಿಆರೆಸ್, ಎನ್‌ಸಿಪಿ, ಎಸ್‌ಪಿ, ಎನ್‌ಸಿಪಿ , ಎಎಪಿ ಮತ್ತಿತರ ಪಕ್ಷಗಳ ಬೆಂಬಲ ಇದ್ದರೂ  ಎನ್‌ಡಿಎ ಅಭ್ಯರ್ಥಿಯನ್ನು ಪರಾಭವಗೊಳಿಸುವಷ್ಟು ಮತ ಪಡೆಯುವ ಸಾಧ್ಯತೆ ಇಲ್ಲ ಎಂದೇ ಹೇಳಲಾಗುತ್ತಿದೆ.