ಮೈಸೂರು: ಆಷಾಢ ಮಾಸದ ನಾಲ್ಕನೇ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ದೇವಿ ದರ್ಶನ ಪಡೆದರು.
ಆರೋಪ ಮುಕ್ತರಾದ ಬಳಿಕ ನಾಡ ಅಧಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ದೇವಸ್ಥಾನ ಮುಂಭಾಗ ಪ್ರಸಾದ ವಿತರಿಸಿದರು.
ಈ ವೇಳೆ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್, ಮಾಜಿ ಸಿಎಮ್ ಸಿದ್ದರಾಮಯ್ಯ ಇಬ್ಬರು ಸೇರಿ ಕಾಂಗ್ರೆಸ್ ಗೆ ಜಾತಿ ಪಟ್ಟ ಅಂಟಿಸಿದ್ದಾರೆ ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ ಒಬ್ಬ ಒಳ್ಳೆಯ ನಾಯಕ ಎಂದು ಕೊಂಡಿದ್ದಾರೆ. ಸಿಎಂ ಆಗಲು ಸಮುದಾಯ ತನ್ನ ಬೆನ್ನಿಗೆ ಬರಬೇಕು ಎಂದು ಹೇಳುವ ಮೂಲಕ ಅವರು ಜಾತಿವಾದಿ ಆಗಿದ್ದಾರೆ ಎಂದು ಹೇಳಿದರು.
ಕುರುಬರ ನಾಯಕ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಸಹ ಜಾತಿವಾದಿಯಾಗಿದ್ದಾರೆ. ಇವರಿಬ್ಬರು ಸೇರಿ ಕಾಂಗ್ರೆಸ್ ಗೆ ಜಾತಿಯ ಕೆಸರು ಅಂಟಿಸಿದ್ದಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್ ಈ ವಿಚಾರದಲ್ಲಿನ ಹೇಳಿಕೆಗಳಿಗೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಈಶ್ವರಪ್ಪ ಹೇಳಿದರು.
ನಾನು ಯಾವ ತಪ್ಪು ಮಾಡದಿದ್ದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ.ಈಗ ಆರೋಪ ಮುಕ್ತನಾಗಿದ್ದೇನೆ. ನನ್ನನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

