ತುಮಕೂರು: ತನ್ನ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂಬ ಸಂತೋಷ್ ಡೆತ್ ನೋಟ್ ಇದ್ದರೂ ಪೊಲೀಸರು ಬಿ ರಿಪೋರ್ಟ್ ಹಾಕಿರುವುದನ್ನು ನೋಡಿದರೆ ಸರ್ಕಾರ ಆತ್ಮಹತ್ಯೆ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಮಾಜಿ ಸಿಎಂಸಿದ್ದರಾಮಯ್ಯ ಆರೋಪಿಸಿದರು.
ತುಮಕೂರು ಜಿಲ್ಲೆ ಶಿರಾದಲ್ಲಿ ಸಿದ್ದರಾಮಯ್ಯ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.
ಗುತ್ತಿಗೆದಾರ ಸಂತೋಷ್, ಈಶ್ವರಪ್ಪ ಕೆಲಸ ಮಾಡಿಸಿ ಹಣ ಕೊಡುತ್ತಿಲ್ಲ, ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿರುವ ಡೆತ್ ನೋಟ್ ಮೊಬೈಲ್ ನಲ್ಲಿ ಪತ್ತೆಯಾಗಿತ್ತು.
ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಆಗಲೇ ಒತ್ತಾಯಿಸಿದ್ದರೂ ಸರ್ಕಾರ ವಹಿಸಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಕಮೀಷನ್ ದಂಧೆಯಿಂದಾಗಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಸರ್ಕಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದರೆ ಈಶ್ವರಪ್ಪ ಪಾತ್ರ ಬಯಲಿಗೆ ಬರುತ್ತದೆ ಎಂದು ಸಿದ್ದು ಹೇಳಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ಸಂಬಂಧ ಭಕ್ತ ವತ್ಸಲಂ ಸಮಿತಿ ವರದಿ ಕೊಟ್ಟಿದೆ, ವರದಿಯನ್ನು ಇನ್ನು ನೋಡಿಲ್ಲ, ಬ್ಲಾಕ್ ವರ್ಡ್ ಕ್ಲಾಸ್ ಗೆ ಶೇ 33ರಷ್ಟು ರಿಸರ್ವೆಷನ್ ಕೊಡಬೇಕೆಂದು ಶಿಫಾರಸ್ಸು ಮಾಡಿದ್ದಾರೆ.
ಹಿಂದುಳಿದ ಜಾತಿಯವರಿಗೆ ಮೀಸಲಾತಿ ಇರಬೇಕು ಅಂತ ಹಿಂದಿನಿಂದಲ್ಲೂ ಹೇಳಿಕೊಂಡು ಬಂದಿದ್ದೇನೆ. ವರದಿಯಲ್ಲಿ ಏನಿದೆ ಎನ್ನುವುದನ್ನು ನೋಡುತ್ತೇನೆ ಎಂದು ಸಿದ್ದು ಹೇಳಿದರು.
ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಮೀಸಲಾತಿ ಇರಬೇಕು ಎಂದು ಸಂವಿಧಾನ ನೀಡಿರುವ ಹಕ್ಕನ್ನು ಪಾಲಿಸಬೇಕಿರುವುದು ಎಲ್ಲ ಸರ್ಕಾರಗಳ ಜವಾಬ್ದಾರಿ, ಈ ನಿಟ್ಟಿನಲ್ಲಿ ಸಮಿತಿ ವರದಿ ನೀಡಿದೆ ಎಂದರು.
ನಾನು ಇವತ್ತಿನವರೆಗೂ ಹುಟ್ಟು ಹಬ್ಬ ಮಾಡಿಕೊಂಡಿಲ್ಲ.ಈ ವರ್ಷ 75ನೇ ವರ್ಷ ತುಂಬುತ್ತಿದೆ. ಅಭಿಮಾನಿಗಳು ಸ್ನೇಹಿತರು ಸೇರಿಕೊಂಡು, ಇದೊಂದು ಮೈಲಿಗಲ್ಲು ಎಂದು ತೀರ್ಮಾನ ಮಾಡಿ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಅಮೃತ ಮಹೋತ್ಸವ ಮಾಡ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಕೆಪಿಸಿಸಿ ಉಪಾಧ್ಯಕ್ಷ ಕೆ.ಎನ್.ರಾಜಣ್ಣ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜಮೀರ್ ಅಹಮದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

