ಬೆಂಗಳೂರು: ಗಾಂಧಿ ಕುಟುಂಬದ ಹೆಸರಿನಲ್ಲಿ ಮೂರು ನಾಲ್ಕು ತಲೆಮಾರಿಗಾಗುವಷ್ಟು ಹಣ ಮಾಡಿಕೊಂಡಿದ್ದೇವೆ ಎಂಬ ಶಾಸಕ ರಮೇಶ್‍ಕುಮಾರ್ ಅವರ ಹೇಳಿಕೆಗೆ ಬದ್ದರಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದರು.
ರಮೇಶ್‍ಕುಮಾರ್ ಅವರು ಬಾಯಿ ತಪ್ಪಿ ಈ ಹೇಳಿಕೆ ನೀಡಿಲ್ಲ. ಅವರ ಮನಸ್ಸಿನಲ್ಲಿ ಏನಿತ್ತೋ ಅದನ್ನೇ ಹೇಳಿದ್ದಾರೆ. ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಹೋರಾಟ ನಡೆಸುತ್ತಿದ್ದಾರೆ ಎಂದು ಕಿಡಿಯಾಡಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಎಂದರೆ ಕಾಂಗ್ರೆಸ್ ನವರು ಎಷ್ಟು ಭ್ರಷ್ಟಾಚಾರ ನಡೆಸಿರಬಹುದು ಎಂದು ಪ್ರಶ್ನಿಸಿದರು.
ಈ ಕುರಿತು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನವರಿಗಿಲ್ಲ ಎಂದರು.
ರಮೇಶ್‍ಕುಮಾರ್ ಏನೇ ಹೇಳೀದರೂ ಅದಕ್ಕೆ ಒಂದು ತೂಕವಿರುತ್ತದೆ. ಅವರು ಸುಖಾಸುಮ್ಮನೆ ಈ ಮಾತನ್ನು ಹೇಳಿಲ್ಲ. ಬಿಜೆಪಿ ವಿರುದ್ಧ ಹೋರಾಟ ನಡೆಸುವ ತಾಕತ್ತಿದ್ದರೆ ಮೊದಲು ಈ ಹೇಳಿಕೆಗೆ ಉತ್ತರ ಕೊಡಿ ಎಂದು ರೇಣುಕಾಚಾರ್ಯ ಒತ್ತಾಯಿಸಿದರು.
ದೇಶದ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇನೂ ಆಕಾಶದಿಂದ ಇಳಿದಿದ್ದಾರ. ತನಿಖೆಗೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸುವುದು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ನ್ಯಾಷನಲ್ ಹೆರಾಲ್ಡ್ ಹಗರಣ ನಡೆದಿಯೋ ಇಲ್ಲವೋ ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸುತ್ತದೆ. ಆದರೆ ತನಿಖೆಯೇ ಮಾಡಬಾರದೆಂದು ಹೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

