ಬಿಜೆಪಿ ಮುಖಂಡನ ಹತ್ಯೆ:ಆರೋಪಿಗಳ ಶೀಘ್ರ ಬಂಧನಕ್ಕೆ ಸಿಎಂ ಸೂಚನೆ

ಬೆಂಗಳೂರು: ದಕ್ಷಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಬಿಜೆಪಿಯ ಪ್ರವೀಣ್ ನೆಟ್ಯಾರು ಹತ್ಯೆ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಈಗಾಗಲೇ ಆ ವಲಯದ ಐಜಿಪಿ ಹಾಗೂ ಮಂಗಳೂರು ಎಸ್‍ಪಿಯವರ ಜತೆ ನಾನು ಮಾತನಾಡಿದ್ದೇನೆ ಎಂದು ತಿಳಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಲಾಖೆ ಅಧಿಕಾರಿಗಳ ಜತೆ ಮಾತನಾಡಿದ್ದಾರೆ ಎಂದು ಹೇಳಿದರು.
ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ. ಆರೋಪಿಗಳು ಕೇರಳ ಗಡಿ ಭಾಗದಿಂದ ಬಂದಿರಬಹುದೆಂಬ ಶಂಕೆ ಇದೆ‌ ಎಂದು ‌ಹೇಳಿದರು.
ನಾಕಾಬಂದಿ ರಚಿಸಿ ಪತ್ತೆ ಮಾಡಲು ಸೂಚಿಸಲಾಗಿದೆ. ಆರೋಪಿಗಳು‌ ಎಂತವರೇ ಆದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ ಎಂದು ಎಚ್ಚರಿಸಿದರು. 
ಯಾವ ಕಾರಣಕ್ಕಾಗಿ ಕೊಲೆ ನಡೆದಿದೆ ಎಂಬುದು ಗೊತ್ತಿಲ್ಲ. ಒಂದು ವರ್ಗ ಸಮಾಜದಲ್ಲಿ ಇಂತಹ ದುಷ್ಕೃತ್ಯ ನಡೆಸಲು ಸಂಚು ನಡೆಸುತ್ತದೆ. ಅಂತಹವರನ್ನು ಬಗ್ಗುಬಡಿಯಲು ನಮ್ಮ ಪೊಲೀಸರು ಸಿದ್ಧರಿದ್ದಾರೆ. 
ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ‌ಬೊಮ್ಮಾಯಿ ತಿಳಿಸಿದರು.