ಬೆಂಗಳೂರು: ಯಾವುದೇ ಒಂದು ಸಮುದಾಯದಿಂದ ಒಬ್ಬರು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ.ಎಲ್ಲಾ ಸಮುದಾಯಗಳ ವಿಶ್ವಾಸ ಗಳಿಸಬೇಕು ಎಂದು ಸಚಿವ ಸುಧಾಕರ್ ಶಾಸಕ ಜಮೀರ್ ಗೆ ಟಾಂಗ್ ನೀಡಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು ಜನರ ನಾಯಕತ್ವದ ಮೇಲೆ ನಂಬಿಕೆ ಇಟ್ಟವರು ಮಾತ್ರ ಮುಖ್ಯಮಂತ್ರಿಯಾಗಬಹುದು ಎಂದು ಮಾರ್ಮಿಕವಾಗಿ ನುಡಿದರು.
ಯಾವುದೇ ಸಮುದಾಯಕ್ಕೆ ನೋವಾಗುವ ರೀತಿಯಲ್ಲಿ ಹೇಳಿಕೆ ನೀಡುವುದು ಸರಿಯಲ್ಲ, ಸಚಿವರಾಗಿ ಅನುಭವವಿದ್ದ ಜಮೀರ್ ಅಹ್ಮದ್‌ರಿಂದ ಒಕ್ಕಲಿಗರಿಗೆ ನೋವಾಗುವಂತಹ ಮಾತನ್ನು ನಿರೀಕ್ಷೆ ಮಾಡಿರಲಿಲ್ಲ.
ರಾಜಕಾರಣಿಗಳು ಮಾತನಾಡುವ ಮುನ್ನ ಯೋಚನೆ ಮಾಡಿ ಮಾತನಾಡಬೇಕು ಎಂದು ಸುಧಾಕರ್ ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆ ವೇಳೆ ಬಾಯಿ ಬಡಿದುಕೊಂಡರೂ ಪ್ರಯೋಜನ ಆಗಲಿಲ್ಲ. ಈಗ ಮೌನಕ್ಕೆ ಶರಣಾಗಿದ್ದಾರೆ.
54 ವರ್ಷ ಆಡಳಿತ ಮಾಡಿದ್ದ ಕಾಂಗ್ರೆಸ್ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲವೆ ಆಗ ಎಲ್ಲವೂ ಸರಿ ಇತ್ತು ಅನ್ನುವವರು ಈಗೇಕೆ ಸಂದೇಹ ಪಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಗಳಾಗಿದ್ದಾಗಲೇ 8-10 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದರು.
ಅಮಿತ್ ಶಾ ಅವರನ್ನು ಗಡಿಪಾರು ಮಾಡಲಾಗಿತ್ತು. ಕಾಂಗ್ರೆಸ್‌ನ ದ್ವಿಮುಖ ನೀತಿಯನ್ನು ಜನರು ಒಪ್ಪಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದವರು ಮಾತ್ರ ತನಿಖೆ, ವಿಚಾರಣೆಗೆ ಸಹಕರಿಸುತ್ತಾರೆ ಎಂದು ಕಾಂಗ್ರೆಸ್ ನವರಿಗೆ ಟಾಂಗ್ ನೀಡಿದರು.
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿಗೆ ಶಕ್ತಿ ಇಲ್ಲ ಎಂದು ಹೇಳುವವರಿಗೆ ಜುಲೈ 28 ರಂದು ನಡೆಯಲಿರುವ ಜನೋತ್ಸವ ಸಮಾವೇಶದಲ್ಲಿ ಉತ್ತರ ಸಿಗಲಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬಿಜೆಪಿ ಜನರಿಂದ ಮೇಲೆ ಬಂದಿರುವ ಪಕ್ಷ. ಜನರಿಗೋಸ್ಕರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಆಡಳಿತಕ್ಕೆ ಬಂದು 3 ವರ್ಷವಾಗಿದೆ, ಕೋವಿಡ್ ಕಾರಣದಿಂದ ಕಳೆದ 2 ವರ್ಷಗಳಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ. ಈಗ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

