ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜೈ ಶಾ ಆದಾಯ ಮೂಲವನ್ನು ಕೇಂದ್ರ ತನಿಖಾ ಸಂಸ್ಥೆಗಳು ಏಕೆ ಹುಡುಕುತ್ತಿಲ್ಲಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಅದಾನಿ ಪೋರ್ಟ್ ನಲ್ಲಿ ಹಲವು ಬಾರಿ ಸಾವಿರಾರು ಕೋಟಿ ರೂ. ಮೊತ್ತದ ಡ್ರಗ್ಸ್ ಪತ್ತೆಯಾಯಿತು. ಸಿಬಿಐ, ಇಡಿ ಇದರ ಕುರಿತು ಏಕೆ ತನಿಖೆ ಮಾಡುತ್ತಿಲ್ಲ ಎಂದು ಕೆಪಿಸಿಸಿ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ತರಲು ಆಪರೇಷನ್ ಕಮಲ ನಡೆಸಲಾಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಕರೆದೊಯ್ದು ಮುಂಬೈ ಹೋಟೆಲ್‍ನಲ್ಲಿಟ್ಟು ಕೋಟ್ಯಾಂತರ ರೂ. ಖರ್ಚು ಮಾಡಲಾಯಿತು ಈ ಹಣದ ಮೂಲವನ್ನು ಹುಡುಕಲಿಲ್ಲ ಎಂದು ಕಿಡಿಕಾರಿದೆ.
ಸಚಿವ ಸ್ಥಾನವನ್ನು 50ರಿಂದ 60 ಕೋಟಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಬಿಜೆಪಿ ಶಾಸಕರೇ ಹೇಳಿಕೆ ನೀಡಿದ್ದಾರೆ. ಸಿಎಂ ಹುದ್ದೆಗೆ 2,500 ಕೋಟಿ ಕೇಳಲಾಯಿತು ಎಂಬ ಹೇಳಿಕೆಯ ಕುರಿತು ಕೇಂದ್ರ ತನಿಖಾ ಸಂಸ್ಥೆಗಳು ಬೆನ್ನತ್ತಲಿಲ್ಲವೇಕೆ ಎಂದು ಕೇಳಿದೆ.
ಆಪರೇಷನ್ ಕಮಲದ 1000 ಕೋಟಿ ವ್ಯವಹಾರ ಕೇಳಲಿಲ್ಲ, 500 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಮಗಳ ಅದ್ಧೂರಿ ಮದುವೆ ಮಾಡಿದ ಜನಾರ್ದನ ರೆಡ್ಡಿ ಅವರ ಆರ್ಥಿಕ ಮೂಲವನ್ನೂ ತನಿಖೆ ಮಾಡಲಿಲ್ಲ.
ಕೇಂದ್ರ ತನಿಖಾ ಸಂಸ್ಥೆಗಳು ತನಿಖಾ ಸಂಸ್ಥೆಗಳಾಗಿ ಉಳಿದಿಲ್ಲ, ಬಿಜೆಪಿಯ ಅಪಪ್ರಚಾರದ ಯಂತ್ರಗಳಾಗಿವೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ರಫೆಲ್ ಹಗರಣ ವಿಚಾರದಲ್ಲಿ ಸಿಬಿಐ ಮುಖ್ಯಸ್ಥರನ್ನೇ ಗೂಡಾಚಾರಿಕೆ ಮಾಡಿ, ರಾತ್ರೋರಾತ್ರಿ ಎತ್ತಂಗಡಿ ಮಾಡಿದ ಇತಿಹಾಸ ಇದಕ್ಕೆ ಪುಷ್ಠಿ ಕೊಡುತ್ತದೆ.
ಈಗ ಸೋನಿಯಾ ಗಾಂಧಿಯವರ ವಿಚಾರಣೆಯೂ ಸಹ ಬಿಜೆಪಿಯ ದ್ವೇಷ ರಾಜಕೀಯದ ಕುತಂತ್ರದ ಭಾಗ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೇಂದ್ರ ಸರ್ಕಾರಕ್ಕೆ ಇಬ್ಬರು ಮಾಲೀಕರಿದ್ದು, ಆ ಉದ್ಯಮಿಗಳು ಹೇಳಿದಂತೆ ಎಲ್ಲವೂ ನಡೆಯುತ್ತಿದೆ. ಐಟಿ, ಇಡಿ, ಸಿಬಿಐಗಳ ಮಾಲೀಕತ್ವ ಕೇಂದ್ರ ಸರ್ಕಾರದ್ದು. ಕೇಂದ್ರ ಸರ್ಕಾರಕ್ಕೆ ಉದ್ಯಮಿಗಳು ಮಾಲೀಕರಾಗಿದ್ದಾರೆ.
ಹೀಗಾಗಿ ಇಲ್ಲಿ ಯಾರೂ ಸ್ವತಂತ್ರರಲ್ಲ. ಸ್ವಾಯುತ್ತ ತನಿಖಾ ಸಂಸ್ಥೆಗಳು ಸ್ವತಂತ್ರ ಕಳೆದುಕೊಂಡು 8 ವರ್ಷಗಳಾಗಿವೆ ಕಾಂಗ್ರೆಸ್ ಜರಿದಿದೆ.

