ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಯಾರಿಗೂ ರಕ್ಷಣೆ ಇಲ್ಲ -ಡಿಕೆಶಿ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಯಾರಿಗೂ ರಕ್ಷಣೆ ಇಲ್ಲ,ಸರ್ಕಾರ ನೈತಿಕ ಪೊಲೀಸ್ ಗಿರಿಗೆ ಪ್ರೋತ್ಸಾಹ ನೀಡಿದ್ದರಿಂದ ಪರಿಸ್ಥಿತಿ ಹದಗೆಡಲು ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.

ಅಹಿತಕರ ಘಟನೆಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ದೂರಿದರು.

ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ಹತ್ಯೆ ಯಾಗಿರುವುದು ಬಹಳ ಅನ್ಯಾಯ ಇದನ್ನು ಖಂಡಿಸುತ್ತೇವೆ ಎಂದರು.

ನಮಗೆ ಇದರಲ್ಲಿ ರಾಜಕಾರಣ ಬೇಕಿಲ್ಲ. ಸರ್ಕಾರದ ಕ್ರಮಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನು ತನ್ನ ಕೆಲಸ ಮಾಡಬೇಕು, ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾವು ಜನರ ಭಾವನೆಗೆ ಗೌರವ ನೀಡುತ್ತೇವೆ. ಜನರೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಇದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದು ಹೇಳಿದರು.

ಕೊಲೆ ಪ್ರಕರಣದಲ್ಲಿ ಸರ್ಕಾರ ಯಾವ ತರದ ತನಿಖೆ ಮಾಡಲಿ, ಯಾವುದೇ ಸಂಘಟನೆಯನ್ನು ನಿಷೇಧಿಸಲಿ, ಆದರೆ ಮೊದಲು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಡಿಕೆಶಿ ಒತ್ತಾಯಿಸಿದರು.

ಪೊಲೀಸರು ಸ್ವಾತಂತ್ರ್ಯವಾಗಿ ತನಿಖೆ ಮಾಡಲು ಬಿಡಿ. ಪೊಲೀಸ್ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣ ದಾರಿ ತಪ್ಪಿಸಬಾರದು ಎಂದು ತಿಳಿಸಿದರು.

ನಾನು ಬುಧವಾರ ಸಂಜೆಯೇ ಬೆಳ್ಳಾರೆಗೆ ತೆರಳಲು ನಿರ್ಧರಿಸಿದ್ದೆ. ಆದರೆ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ತಿಳಿಯಾದ ನಂತರ ಭೇಟಿ ನೀಡಿ ಎಂದು ಸಲಹೆ ನೀಡಿದ್ದಾರೆ ಹಾಗಾಗಿ ಭೇಟಿಯನ್ನು ಮುಂದೂಡಿದ್ದೇನೆ.

ಜನಾಕ್ರೋಶಕ್ಕೆ ಹೆದರಿ ಸರ್ಕಾರ ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಅದು ಜನೋತ್ಸವ ಅಲ್ಲ, ಭ್ರಷ್ಟೋತ್ಸವ. ನಾವು ಈ ಪಟ್ಟ ಈಗಾಗಲೇ ನೀಡಿದ್ದೇವೆ ಎಂದು ಉತ್ತರಿಸಿದರು.

ಸರ್ಕಾರ ಸರಿಯಾಗಿ ಇದ್ದಿದ್ದರೆ ಯಾಕೆ ಹೆದರಬೇಕು? ಕಾರ್ಯಕ್ರಮ ಮಾಡಬೇಕಿತ್ತು. ಅವರು ಸಾಧನೆ ಮಾಡದೇ ಈ ಕಾರ್ಯಕ್ರಮ ಮಾಡಲು ಮುಂದಾಗಿದ್ದೇ ತಪ್ಪು ಎಂದರು.