ಬೆಂಗಳೂರು: ಮಾಡದ ಸಾಧನೆಗಳ ಹೆಸರನಲ್ಲಿ ರಾಜ್ಯ ಸರಕಾರವೂ ಸಾವಿನಲ್ಲೂ ಸಿಂಪಥಿ ಗಿಟ್ಟಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಹೆಚ್ಡಿಕೆ, ಸಾವಿನ ಮನೆಯಲ್ಲಿ ಸಂಭ್ರಮಿಸುವ ವಿಕೃತಿ ಬೇಡವೆಂದು ನಾನು ಹೇಳಿದ್ದೆ. ಪಾಪ.. ರಾಜ್ಯ ಬಿಜೆಪಿ ಸರಕಾರಕ್ಕೆ ಮಧ್ಯರಾತ್ರಿಯಲ್ಲೇ ಜ್ಞಾನೋದಯವಾಗಿದೆ ಎಂದು ಚಾಟಿ ಬೀಸಿದ್ದಾರೆ.
ʼಸಾವುಗಳನ್ನೇ ಸಾಧನೆʼಗಳನ್ನಾಗಿ ಮಾಡಿಕೊಂಡು, ಅವುಗಳನ್ನೇ ಅಧಿಕಾರದ ಏಣಿ ಮಾಡಿಕೊಂಡವರಿಗೆ ಅಂತೂ ಪಾಪಪ್ರಜ್ಞೆ ಕಾಡಿತಲ್ಲ ಎನ್ನುವ ಸಮಾಧಾನ, ಸರಕಾರ ಮುಖ ಉಳಿಸಿಕೊಂಡಿದೆ ಎಂದು ಅವರು ಟಾಂಗ್ ನೀಡಿದ್ದಾರೆ.
ಸರಕಾರದ ಕಾಳಜಿಯಲ್ಲಿ ಸಾಚಾತನವಿಲ್ಲ. ʼಸಾವಿನಲ್ಲೂ ಸಿಂಪಥಿʼ ಗಿಟ್ಟಿಸುವ ವ್ಯರ್ಥ ಪ್ರಯತ್ನ ವಾಕರಿಕೆ ತರಿಸುತ್ತದೆ. ಸಾಧನಾ ಸಮಾವೇಶ ನಿಂತಿತಲ್ಲ ಎನ್ನುವ ಹತಾಶೆ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಸಾವುಗಳ ಮೆರವಣಿಗೆ ನಡೆಯುತ್ತಿರುವುದಷ್ಟೇ ಬಿಜೆಪಿ ಸರ್ಕಾರದ ವರ್ಷದ ಸಾಧನೆ! ಎಂದು ಅವರು ಟೀಕಿಸಿದ್ದಾರೆ.
ಜಾತಿ, ಧರ್ಮ, ಆಚಾರ, ವಿಚಾರ, ಆಹಾರ, ವ್ಯಾಪಾರ, ಉಡುಗೆ-ತೊಡುಗೆ ನೆಪದಲ್ಲಿ ರಾಜ್ಯವನ್ನು ಭಾವನಾತ್ಮಕವಾಗಿ ಛಿದ್ರ ಛಿದ್ರ ಮಾಡಿದ್ದಾ ಸಾಧನೆ? ತಿನ್ನುವ ಅನ್ನದಲ್ಲಿ, ಕಲಿಯುವ ಅಕ್ಷರದಲ್ಲಿ, ಉರಿಯುವ ಮನೆಯಲ್ಲಿ ʼಮತಕ್ಕಾಗಿ ಕೋಮು ಗಳʼ ಇರಿಯುವುದಾ ಸಾಧನೆ? ಸಾಧನೆ ನೆಪದಲ್ಲಿ ನಲಿಯುವ ಮುನ್ನ ಕನಿಷ್ಠ ನಾಚುವ ಸೂಕ್ಷ್ಮತೆಯೂ ಇಲ್ಲವಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೆಷ್ಟು ಯುವಕರ ಕಗ್ಗೊಲೆ ಆಗಬೇಕು? ಅದೆಷ್ಟು ಬಡಮನೆಗಳ ದೀಪಗಳು ಆರಬೇಕು? ಮತ್ತೆಷ್ಟು ಹೆತ್ತ ಕರುಳುಗಳು ಕಣ್ಣೀರಿಡಬೇಕು? ಹರ್ಷ, ಚಂದ್ರು ತಾಯಿಂದರ ಆರ್ತನಾದ ಸರಕಾರಕ್ಕೆ ಕೇಳಿಸಿದ್ದಿದ್ದರೆ ಪ್ರವೀಣ್ ನೆಟ್ಟಾರು ಅಮ್ಮನ ಆರ್ತನಾದ ಕೇಳುವ ಸ್ಥಿತಿ ಬರುತ್ತಿತ್ತಾ? ಕೊಲೆಯನ್ನೇ ತಡೆಯಲಾಗದೇ ಈಗ ʼಕೃತಕ ಸಾಂತ್ವನʼ ಹೇಳಿದರೇನು ಪ್ರಯೋಜನ? ಎಂದು ಅವರು ಕುಹಕವಾಡಿದ್ದಾರೆ.
ತಾಯಿಂದಿರ ಆರ್ತನಾದ ಸರಕಾರದ ಕಿವಿಗೆ ಇಂಪಾದ ʼನಾದʼದಂತೆ ಕೇಳುತ್ತಿವೆಯಾ? ಬಿಜೆಪಿಯ ʼಮತಕ್ಕಾಗಿ ಮರಣಮೃದಂಗʼದ ಆಳ-ಅಗಲ ಈಗ ಜನರಿಗೂ ಅರ್ಥವಾಗುತ್ತಿದೆ. ಬಿಜೆಪಿ ಅಧ್ಯಕ್ಷರು ಸೇರಿ ಸಚಿವರಿಬ್ಬರಿಗೆ ಎದುರಾದ ಪ್ರತಿರೋಧವೇ ಜನರ ತಾಳ್ಮೆ ಕಟ್ಟೆಯೊಡೆದಿದೆ ಎನ್ನುವುದಕ್ಕೆ ಸಾಕ್ಷಿ. ಕರಾವಳಿ ಕೆರಳಿದೆ. ಕರ್ನಾಟಕ ಕೆರಳುವುದು ಬಾಕಿ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಏನು ಸಾಧನೆ ಅಂತ ರಾಜ್ಯ ಸರಕಾರ ಜನರಿಗೆ ಹೇಳುತ್ತದೆ? 40% ಕಮಿಷನ್, ಕೋವಿಡ್ ಹೆಸರಿನಲ್ಲಿ ಕೊಳ್ಳೆ, ಅಧಿಕಾರಿಗಳ ವರ್ಗದಲ್ಲಿ ಪೇಮೆಂಟ್ ಕೋಟಾ, ಪಿಎಸ್ಐ ನೇಮಕದಲ್ಲಿ ಕಾಸಿನಾಟ, ಸಹಾಯಕ ಪ್ರಾಧ್ಯಾಕರ ನೇಮಕದಲ್ಲೂ ನೋಟಿನಾಟ, ಜೇಬು ತುಂಬಿಸಿಕೊಳ್ಳುವ ಧನದಾಟ ಬಿಟ್ಟರೆ, ಜನರಿಗೆ ಸರಕಾರ ಮಾಡಿದ್ದೇನು? ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನರಹಂತಕ ರಾಜಕಾರಣ ನಿಲ್ಲಲಿ: ನಡುರಸ್ತೆಯಲ್ಲಿ ಹರಿದ ಪ್ರವೀಣ್ ನೆಟ್ಟಾರು ನೆತ್ತರು, ನಾಡಿನ ಆತ್ಮಸಾಕ್ಷಿಯನ್ನು ಕಲಕಿದೆ. ಒಂದೇ ಊರಿನಲ್ಲಿ ಎಂಟೇ ದಿನದಲ್ಲಿ 2 ಕೊಲೆ ನಡೆದಿವೆ ಎಂದರೆ ಈ ಸರ್ಕಾರ ಬದುಕಿದೆಯಾ? ಸತ್ತಿದೆಯಾ?. ಸತ್ತ ಸರ್ಕಾರದ ಸಾಹುಕಾರನಿಗೆ ಸಂಭ್ರಮದ ಚಿಂತೆ, ಆಗದ ಸಾಧನೆ ಹೇಳಿಕೊಳ್ಳುವ ಅನಿವಾರ್ಯತೆ. ಇನ್ನಾದರೂ ಕಂಡೋರ ಮಕ್ಕಳನ್ನು ಸಾವಿನ ದವಡೆಗೆ ನೂಕಿ ಮತ ಫಸಲು ತೆಗೆಯುವ ʼನರಹಂತಕ ರಾಜಕಾರಣʼ ನಿಲ್ಲಲಿ ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದ್ದಾರೆ.

