ಬೆಂಗಳೂರು: ತನ್ನ ಕಾರ್ಯಕರ್ತರನ್ನೇ ರಕ್ಷಣೆ ಮಾಡಿಕೊಳ್ಳಲಾಗದ ಅಸಮರ್ಥ ಬಿಜೆಪಿ ಸರ್ಕಾರ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಎನ್ ಐಎ ತನಿಖೆಗೆ ಒಪ್ಪಿಸಿದೆ ಆದರೆ, ಕರಾವಳಿಯಲ್ಲಿ ನಡೆದ ಎಲ್ಲ ಹತ್ಯೆಗಳನ್ನೂ ಎನ್ ಐಎ ತನಿಖೆಗೆ ವಹಿಸಲು ಹಿಂಜರಿಯುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಕರಾವಳಿ ಭಾಗದಲ್ಲಿ ಪ್ರತಿ ಕೊಲೆ ಬಗ್ಗೆಯೂ ಸರ್ಕಾರಕ್ಕೆ ಮಾಹಿತಿ ಇದೆ. ಆ ಕೊಲೆಗಳು ಏಕಾಗುತ್ತಿವೆ ಎನ್ನುವುದೂ ಗೊತ್ತಿದೆ. ಆದರೆ, ಡಬಲ್ ಎಂಜಿನ್ ಸರ್ಕಾರ ಡಬಲ್ ಗೇಮ್ ಆಡುತ್ತಿದೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಎಂದು ಬೀಗುವ ಬಿಜೆಪಿ ತನಗೆ ಅಧಿಕಾರ ತಂದುಕೊಟ್ಟ ಯುವಕರ ಜೀವಗಳಿಗೇ ಗ್ಯಾರಂಟಿ ಕೊಡದಷ್ಟು ದುರ್ಬಲವಾಗಿದೆ ಎಂದು ಟೀಕಿಸಿದ್ದಾರೆ.
ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್ ಐಎ ತನಿಖೆಗೆ ಒಪ್ಪಿಸಿ ವೀರಾವೇಶ ಮೆರೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿ ಜನರಿಗೆ ಕೊಟ್ಟ ಸಂದೇಶವೇನು ಎಂದು ಪ್ರಶ್ನಿಸಿದ್ದಾರೆ.
ಅವರ ನಾಲಿಗೆಯ ಮೇಲೆ ಒಮ್ಮೆಯಾದರೂ ಶಾಂತಿ ಕಾಪಾಡಿ ಎನ್ನುವ ಮಾತು ಬರಲಿಲ್ಲ. ನೆಮ್ಮದಿಗಾಗಿ ಕಿಂಚಿತ್ ಕ್ರಮ ವಹಿಸಿದಾರಾ ಅದೂ ಇಲ್ಲ.
ಹಿಂಸೆಗೆ ಇನ್ನಷ್ಟು ತುಪ್ಪಾ ಸುರಿದು ಬಂದರು ಎಂದು ಕಿಡಿಕಾರಿದ್ದಾರೆ.
ಎನ್ ಐಎ ತನಿಖೆಗೆ ವಹಿಸಿದ ಎಷ್ಟು ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ ಒಂದಕ್ಕೂ ಇಲ್ಲ.
ತನಿಖೆಯಲ್ಲಿ ಮುಂದೆ ಸಾಗುತ್ತಿದ್ದ ರಾಜ್ಯ ಪೊಲೀಸರಿಗೆ ಮುಖ್ಯಮಂತ್ರಿಗಳು ಕೊಟ್ಟ ಸಂದೇಶವೇನು.
ಸ್ವತಃ ಗೃಹ ಸಚಿವರಾಗಿದ್ದ ಅವರು, ಸಿಎಂ ಆದ ಮೇಲೆ ತಮ್ಮ ಅಧೀನದ ಪೊಲೀಸ್ ವ್ಯವಸ್ಥೆಯನ್ನೇ ನಂಬುತ್ತಿಲ್ಲ. ಇದು ವಿಪರ್ಯಾಸವಲ್ಲವೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳು ಇಲ್ಲವೆ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟರೆ ಕರಾವಳಿ ಹಿಂಸಾಕಾಂಡವನ್ನು ಮೂಲೋತ್ಪಾಟನೆ ಮಾಡಬಲ್ಲರು.
ಆದರೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅದು ಬೇಕಿಲ್ಲ. ಸಮರ್ಥ ಅಧಿಕಾರಿಗಳನ್ನು ನಂಬದೆ ಎನ್ ಐಎಗೆ ವಹಿಸುವ ನಾಟಕವಾಡಿ ಕಗ್ಗೊಲೆಗಳ ತನಿಖೆಗೆ ಸಮಾಧಿ ಕಟ್ಟಲು ಹೊರಟಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

