ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಖಂಡಿಸಿ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಬಿಜೆಪಿ ವಿರುದ್ಧ ಎಬಿವಿಪಿ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ.
ಮೂರು ದಿನಗಳ ಹಿಂದಷ್ಟೇ ಬಿಜೆಪಿ ರಾಜ್ಯಾದ್ಯಕ್ಷ ನಳೀನ್‍ಕುಮಾರ್ ಕಟೀಲ್, ಸಚಿವರಾದ ಸುನೀಲ್‍ಕುಮಾರ್ ಅಂಗಾರ ಸೇರಿದಂತೆ ವಿವಿಧ ಮುಖಂಡರಿಗೆ ಆರ್‍ಎಸ್‍ಎಸ್‍ನ ಅಂಗ ಸಂಸ್ಥೆಗಳು ಬಿಸಿ ಮುಟ್ಟಿಸಿದ್ದವು.
ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಎಬಿವಿಪಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ಬೆಳಿಗ್ಗೆ ಬೆಂಗಳೂರಿನ ಜಯಮಾಲ್‍ನಲ್ಲಿರುವ ಆರಗ ಜ್ಞಾನೇಂದ್ರ ಅವರ ಸರ್ಕಾರಿ ನಿವಾಸಕ್ಕೆ ನೂರಾರು ಕಾರ್ಯಕರ್ತರು ನುಗ್ಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಒಂದು ಹಂತದಲ್ಲಿ ಸಚಿವರ ನಿವಾಸದ ಕಾಂಪೌಂಡ್ ಒಳಗೆ ನುಗ್ಗಿ ಹೂ ಕುಂಡಗಳನ್ನು ಒಡೆದು ಹಾಕಿ, ಮನೆಯ ಬಾಗಿಲನ್ನು ಮುರಿದು ಒಳನುಗ್ಗಲು ಕಾರ್ಯಕರ್ತರು ಪ್ರಯತ್ನಿಸಿದರು.
ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿ ದರು.
ಇಷ್ಟಕ್ಕೂ ಜಗ್ಗದ ಎಬಿವಿಪಿ ಕಾರ್ಯಕರ್ತರು ಜ್ಞಾನೇಂದ್ರ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ಪಿಎಫ್‍ಐ ಮತ್ತು ಎಸ್‍ಡಿಪಿಐ ಸಂಘಟನೆಗಳನ್ನು ನಿಷೇಸಬೇಕೆಂದು ಆಗ್ರಹಿಸಿದರು.
ಪೊಲೀಸ್ ಲಾಠಿಗೂ ಜಗ್ಗದ ಕಾರ್ಯಕರ್ತರು ನಿವಾಸದ ದಾಂಧಲೆ ಮಾಡಿ ಹೈಡ್ರಾಮ ಸೃಷ್ಟಿಸಿದರು. ಮನೆಯ ಬೀಗ ಒಡೆಯುವ ಪ್ರಯತ್ನ ನಡೆಸಿದರು.
ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಪ್ರತಿಭಟನೆಯಿಂದಾಗಿ ಜಯಮಾಲ್‍ನ ಮನೆ ಬಳಿ ಆತಂಕದ ಪರಿಸ್ಥಿತಿ ಉಂಟಾಯಿತು.
ಪ್ರತಿಭಟನೆ ನಿರತ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಹಿಂದೂ ಕಾರ್ಯಕರ್ತರನ್ನು ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದ್ದು, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಎಬಿವಿಪಿ ಕಾರ್ಯಕರ್ತರು ಒತ್ತಾಯಿಸಿದರು.
ನಾವು ವೈಯಕ್ತಿಕವಾಗಿ ಯಾರ ವಿರುದ್ಧವೂ ಪ್ರತಿಭಟನೆ ನಡೆಸುತ್ತಿಲ್ಲ. ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆ ಹಾಗೂ ಅದರ ಮುಖಂಡರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದು ನಮ್ಮ ಆಗ್ರಹವಾಗಿದೆ.
ಆದರೆ ಸರ್ಕಾರ ಮೀನಾಮೇಷ ಎಣಿಸಿದ ಪರಿಣಾಮ ಇಂದು ಸಾಲು ಸಾಲು ಹಿಂದೂ ಕಾರ್ಯಕರ್ತರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಪೊಲೀಸರ ಮೇಲೆ ದಬ್ಬಾಳಿಕೆ ಆರೋಪ: ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಅನಾವಶ್ಯಕವಾಗಿ ಲಾಠಿ ಪ್ರಹಾರ ನಡೆಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಎಬಿವಿಪಿ ಕಾರ್ಯಕರ್ತರು ಆರೋಪಿಸಿದರು.
ನಾವು ಗೃಹ ಸಚಿವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಬೇಕೆಂದು ತೀರ್ಮಾನಿಸಿದ್ದೆವು. ಆದರೆ ನಮ್ಮನ್ನು ಒಳ ಬಿಡದೆ ಪೊಲೀಸರು ಲಾಠಿ ಪ್ರಹಾರ ನಡೆಸಿ ದರ್ಪ ತೋರಿಸಿದ್ದಾರೆ ಎಂದು ಕಿಡಿಕಾರಿದರು.
ಪರಿಸ್ಥಿತಿ ಕೈ ಮೀರಿದ್ದನ್ನು ಅರಿತ ಸಿಸಿಬಿ ಅಪರ ಆಯುಕ್ತ ಸಂದೀಪ್ ಪಾಟೀಲ್ ದೌಡಾಯಿಸಿ ಅವಲೋಕನ ಮಾಡಿದರು. ಗೃಹ ಸಚಿವರು ಬೆಂಗಳೂರಿನಲ್ಲಿ ಇಲ್ಲ. ಕಾರ್ಯಕ್ರಮ ನಿಮಿತ್ತ ಅವರು ಹೊರ ಹೋಗಿದ್ದಾರೆ ಎಂದು ಸಮಾಧಾನ ಮಾಡಲು ಯತ್ನಿಸಿದರು.
ಏಕಾಏಕಿ ಸಚಿವರ ಮನೆಗೆ ನುಗ್ಗುವುದು, ಬಾಗಿಲು ಮುರಿಯುವುದು, ದಿಕ್ಕಾರದ ಘೋಷಣೆ ಕೂಗಲು ಅವಕಾಶವಿಲ್ಲ. ನೀವು ಕಾನೂನು ಕೈಗೆತ್ತಿಕೊಂಡರೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಪೊಲೀಸರ ಲಾಠಿ ಪ್ರಹಾರವನ್ನು ಸಮರ್ಥಿಸಿಕೊಂಡರು.

