ಹತ್ಯೆಗೀಡಾದವರ ಕುಟುಂಬಗಳಿಗೆ ಹೆಚ್.ಡಿ.ಕೆ ಸಾಂತ್ವಾನ: 5 ಲಕ್ಷ ಪರಿಹಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು ಹಾಗೂ ಮಸೂದ್ ಅವರ ಮನೆಗಳಿಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿ ದುಃಖತಪ್ತ  ಕುಟುಂಬದವರಿಗೆ ಸಾಂತ್ವಾನ ಹೇಳಿದರು.

ಅಲ್ಲದೆ, ನೊಂದ ಕುಟುಂಬಗಳಿಗೆ ತಲಾ 5 ಲಕ್ಷ ರೂ ಧನ ಸಹಾಯದ ಚೆಕ್ ಗಳನ್ನು ನೀಡಿದರು.

ಸೋಮವಾರ ಮಂಗಳೂರಿಗೆ ಆಗಮಿಸಿದ ಅವರು ವಿಮಾನ ವಿಮಾನ ನಿಲ್ದಾಣದಿಂದ ನೇರವಾಗಿ ಬೆಳ್ಳಾರೆ ಗ್ರಾಮದ ಪ್ರವೀಣ್ ನೆಟ್ಟಾರು ಅವರು ಮನೆಗೆ ತೆರಳಿದರು.

ಪ್ರವೀಣ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಬಳಿಕ ಪ್ರವೀಣ್ ಅವರ ಪತ್ನಿ ನೂತನಾ ಹಾಗೂ ಅವರ ತಂದೆ, ತಾಯಿಗೆ ಸಾಂತ್ವಾನ ಹೇಳಿದರು.

ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ನಿಮ್ಮ ಕುಟುಂಬಕ್ಕೆ ನ್ಯಾಯ ಸಿಗುವ ರೀತಿಯಲ್ಲಿ ನಾನು ಹೋರಾಟ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಆರ್ಥಿಕವಾಗಿ ಅಥವಾ ಯಾವುದೇ ರೀತಿಯ ಸಂಕಷ್ಟ ಎದುರಾದರೂ ನನಗೆ ಕರೆ ಮಾಡಿ. ನಮ್ಮ ಪಕ್ಷವು ನಿಮ್ಮ ನೆರವಿಗೆ ಧಾವಿಸುತ್ತದೆ  ಎಂದು ಹೇಳಿ ಕುಟುಂಬದವರಿಗೆ ತಮ್ಮ ಮಾಬೈಲ್ ಸಂಖ್ಯೆಯನ್ನು ಕೊಟ್ಟರು.

ನಿಮ್ಮೊಂದಿಗೆ ನಾನಿದ್ದೇನೆ. ಪ್ರವೀಣ್ ಆತ್ಮಕ್ಕೆ ಶಾಂತಿ ಸಿಗಲು ನಿಮ್ಮ ಮನೆ ಮಗನಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದು ನಾನು ನೀಡುವ ವಚನ ಎಂದು ಕುಮಾರಸ್ವಾಮಿ  ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಪ್ರವೀಣ್ ಅವರ ಪತ್ನಿ ನೂತನ ಅವರು, ನನ್ನ ಪತಿಯನ್ನು ಕೊಂದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕುಮಾರಸ್ವಾಮಿ ಅವರ ಬಳಿ ಕಣ್ಣೀರಿಟ್ಟರು.

ಆಗ ಧೈರ್ಯ ತುಂಬಿದ ಅವರು, ತಮ್ಮ ವೈಯಕ್ತಿಕ ಮೊಬೈಲ್ ನಂಬರ್ ನೀಡಿ ಯಾವುದೇ ಸಮಸ್ಯೆ ಬಂದರೂ ತಮ್ಮನ್ನು ಸಂಪರ್ಕಿಸಬಹುದು. ತಮಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಪ್ರವೀಣ್ ನೆಟ್ಟಾರು ತಂದೆ, ತಾಯಿ ಅವರಿಗೂ ಧೈರ್ಯ ತುಂಬಿದ ಹೆಚ್ ಡಿಕೆ, ಸ್ಥಳದಲ್ಲೇ ಐದು ಲಕ್ಷ ರೂ. ಪರಿಹಾರದ ಚೆಕ್ ನೀಡಿದರು.

ಮಸೂದ್, ಫಾಝಿಲ್ ಮನೆಗಳಿಗೂ ಭೇಟಿ: ಪ್ರವೀಣ್ ಅವರಿಗಿಂತ ಮೊದಲು ಬೆಳ್ಳಾರೆ ಗ್ರಾಮದಲ್ಲಿ ಹತ್ಯೆಯಾಗಿದ್ದ ಮಸೂದ್ ಅವರ ಕಳಂಜದ ನಿವಾಸಕ್ಕೆ ಕುಮಾರಸ್ವಾಮಿ ಭೇಟಿ ನೀಡಿದರು.

ಮನೆಯಲ್ಲಿದ್ದ ಮಸೂದ್ ಅವರ ಚಿಕ್ಕಪ್ಪ ಹಾಗೂ ಇಡೀ ಕುಟುಂಬಕ್ಕೆ ಸಾಂತ್ವನ ಹೇಳಿದ ಕುಮಾರಸ್ವಾಮಿ, ಆ ಕುಟುಂಬಕ್ಕೂ ಸ್ಥಳದಲ್ಲೇ ಪರಿಹಾರವಾಗಿ 5 ಲಕ್ಷ ರೂ ಚೆಕ್ ಹಸ್ತಾಂತರ ಮಾಡಿದರು.

ಮಸೂದ್ ಮುಗ್ಧ, ನಮ್ಮ ಕುಟುಂಬಕ್ಕೆ ಅನ್ಯಾಯ ಆಗಿದೆ ಎಂದು ಕುಟುಂಬಸ್ಥರು ದುಃಖ ತೋಡಿಕೊಂಡರು.

ಬಳಿಕ ಸೂರತ್ ಕಲ್ ನಲ್ಲಿ ಹತ್ಯೆಯಾದ ಫಾಝಿಲ್ ಮನೆಗೂ ಭೇಟಿ ನೀಡಿ ಅವರ ತಂದೆ ತಾಯಿ ಹಾಗೂ ಕುಟುಂಬಕ್ಕೆ ಸಾಂತ್ವಾನ ಹೇಳಿದರು.ನಂತರ 5 ಲಕ್ಷ ರೂಪಾಯಿ ಮೊತ್ತದ ಪರಿಹಾರ ಚೆಕ್  ನೀಡಿದರು.

ಕುಮಾರಸ್ವಾಮಿ ಅವರೊಂದಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಭೋಜೆಗೌಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜೆಡಿಎಸ್ ಮುಖಂಡರು ಹಾಜರಿದ್ದರು.