ಕಾಂಗ್ರೆಸ್ ಸಾಧನೆಯಿಂದ ವಿಶ್ವದ ಭೂಪಟದಲ್ಲಿ ಕರ್ನಾಟಕದ ಹೆಸರು -ರಾಹುಲ್

ದಾವಣಗೆರೆ:‌ ಕಾಂಗ್ರೆಸ್ ಪಕ್ಕದ ಸಾಧನೆಯಿಂದ ವಿಶ್ವದ ಭೂಪಟದಲ್ಲಿ ಕರ್ನಾಟಕದ ಹೆಸರು ಗುರುತಿಸುವಂತಾಯಿತು ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದರು.
ನಗರದ ಶಾಮನೂರು‌ ಶಿವಶಂಕರಪ್ಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿದ್ದರಾಮಯ್ಯನವರ ಅಮೃತಮಹೋತ್ಸವಕ್ಕೆ ಚಾಲನೆ‌ ನೀಡಿ‌ ಅವರು ಮಾತನಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಲ್ಲಾ ಜನರು ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದರು.ಕೋಮು ಸೌಹಾರ್ದತೆ ನೆಲೆಸಿತ್ತು ಎಂದು ಹೇಳಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೋಮು ದುಳ್ಳುರಿ ಹೆಚ್ಚಾಗಿದೆ.ಶಾಂತಿ ಕದಡಿದೆ, ಜನರಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದು‌ ಕಿಡಿಕಾರಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನೋಟು ಅಮಾನ್ಯೀಕರಣ ಮಾಡಿದ್ದರಿಂದ ಸಣ್ಣ ಉದ್ದಿಮೆದಾರರು ನಷ್ಟ ಅನುಭವಿಸಿದರು.ಜನ ಕೆಲಸವಿಲ್ಲದೆ ಬಹಳ ತೊಂದರೆ ಅನುಭವಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಜನರ ಹಣವನ್ನು ಲೋಕಕಲ್ಯಾಣಕ್ಕೆ ಬಳಸಿದರೆ ಬಿಜೆಪಿ ಜನರ ಹಣವನ್ನು ಕೊಳ್ಳೆ ಹೊಡೆದು ಬೃಹತ್ ಉದ್ದಿಮೆದಾರರಿಗೆ ನೀಡುತ್ತಿದೆ, ಕಾರ್ಪೋರೇಟ್ ಮಂದಿಯನ್ನು ಬೆಳೆಸುತ್ತಿದೆ ಎಂದು ಗುಡುಗಿದರು.
ಬಿಜೆಪಿ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ರೈತರನ್ನು ಕೊಳ್ಳೆ ಹೊಡೆದಿದೆ ಎಂದು ಕಿಡಿಕಾರಿದರು.
ನಮ್ಮ ತಂದೆ ರಾಜೀವ್ ಗಾಂಧಿಯವರು ಕಂಪ್ಯೂಟರ್ ಪರಿಚಯಿಸಿದಾಗ ಬಿಜೆಪಿ ವ್ಯಂಗ್ಯವಾಡಿತು.ಈಗ ಅವರೇ ಕಂಪ್ಯೂಟರೀಕರಣ ಮಾಡಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕ್ಷೀರಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದು ಒಳ್ಳೆಯ ಆಡಳಿತ ಕೊಟ್ಟರು ಎಂದು ಶ್ಲಾಘಿಸಿದರು.
ಸಿದ್ದು ಅವಧಿಯ ಹಲವಾರು ಯೋಜನೆಗಳನ್ನು ರಾಹುಲ್ ಗಾಂಧಿ ಸ್ಮರಿಸಿದರು. ಸಿದ್ದರಾಮಯ್ಯ ಅವರ ಆಢಳಿತದ ಭಾಗ್ಯಗಳನ್ನು ಈಗಲೂ ಜನರು ನೆನಪು ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅಧಿಕಾರ ಹಿಡಿಯಲು ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ಬಸವಣ್ಣನವರ ತತ್ವ ಪಾಲಿಸುವ ಪಕ್ಷವಾಗಿದೆ. ಕಾಂಗ್ರೆಸ್ ಬಿಜೆಪಿ ಹಾಗೂ ಆರ್ ಎಸ್ ಎಸ್ ಅನ್ನು ಸೋಲಿಸಲಿದೆ.ಕಾಂಗ್ರೆಸ್ ಗೆ ಅಧಿಕಾರ ಕೊಟ್ಟರೆ ಜನರ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಯಲಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರಿಗೆ 75 ವರ್ಷಗಳಾಗಿವೆ ಅಂದರೆ ನಂಬಲಾಗುತ್ತಿಲ್ಲ.ಅವರು ಇನ್ನೂ ಯುವಕರಂತೆ ಕಾಣುತ್ತಾರೆ ಎಂದು ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಸಿದ್ದುಗೆ ಶಾಲು ಹೊದಿಸಿ ಹಾರ ಹಾಕಿ ಹುಟ್ಟು ಹಬ್ಬದ ಶುಭಕಾಮನೆಗಳನ್ನು ರಾಹುಲ್ ಗಾಂಧಿ ಸಲ್ಲಿಸಿದರು.
ನಾನು ಯಾರ ಹುಟ್ಟು ಹಬ್ಬಕ್ಕೂ ಹೋಗುವುದಿಲ್ಲ.ಆದರೆ ನನಗೆ ಸಿದ್ದರಾಮಯ್ಯ ಅವರನ್ನ ಕಂಡರೆ ವಿಶೇಷ ಆಕರ್ಷಣೆ ಹಾಗೂ ಪ್ರೀತಿ ಇದೆ ಅದಕ್ಕಾಗಿ ಅವರ ಜನ್ಮ ದಿನದ ಅಮೃತ ಮಹೋತ್ಸವಕ್ಕೆ ಆಗಮಿಸಿದ್ದೇನೆ ಎಂದು ಅವರು ಹೇಳಿದರು.