ದಾವಣಗೆರೆ: ಕೋಮುವಾದಿ ಬಿಜೆಪಿಯನ್ನು ಕಿತ್ತೊಗೆಯಲು ನಾವೆಲ್ಲ ಪಣತೊಡೋಣ ಎಂದು ವಿಧಾನಸಭೆಯ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.
ನಗರದ ಶಾಮನೂರು ಶಿವಶಂಕರಪ್ಪ ಮೈದಾನದಲ್ಲಿ ಕಾಂಗ್ರೆಸ್ ಏರ್ಪಡಿಸಿದ್ದ ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ನಾವು ಒಟ್ಟಾಗಿದ್ದೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಲ್ಲಿನ ಮುಸುಕಿನ ಗುದ್ದಾಟಕ್ಕೆ ಸಿದ್ದು ತೆರೆ ಎಳೆದರು.
ಕಾಂಗ್ರೆಸ್ ನಲ್ಲಿ ಒಗ್ಗಟ್ಟಿದೆ.ಆದರೆ ಬಿಜೆಪಿಯವರು ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಒಡಕು ಮೂಡಿದೆ ಅದಕ್ಕಾಗಿ ದಾವಣಗೆರೆಯಲ್ಲಿ ಸಿದ್ದು ಶಕ್ತಿ ಪ್ರದರ್ಶನ ಹಮ್ಮಿಕೊಂಡಿದ್ದಾರೆ ಎಂದೆಲ್ಲಾ ಬಿಂಬಿಸಿದರು ಈ ಮೂಲಕ ರಾಜ್ಯದ ಜನರಲ್ಲಿ ತಪ್ಪು ಕಲ್ಪನೆ ಬರುವಂತೆ ಮಾಡಲು ಯತ್ನಿಸಿದರು ಎಂದು ದೂರಿದರು.
ಬಿಜೆಪಿಯನ್ನು ನಂಬಬೇಡಿ ಅದು ಕೋಮುವಾದಿ ಪಕ್ಷ. ಮೊದಲು ಈ 40 ಪರ್ಸೆಂಟ್ ಸರ್ಕಾರ ತೊಲಗಬೇಕು ಆಗಷ್ಟೇ ಎಲ್ಲರಿಗೂ ನೆಮ್ಮದಿ ಎಂದು ಸಿದ್ದರಾಮಯ್ಯ ತಿಳಿಸಿದರು
ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದು ನಮ್ಮ ನಾಯಕಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರ ಕೈ ಬಲಪಡಿಸೋಣ ಎಂದು ಸಿದ್ದು ಕರೆ ನೀಡಿದರು.
ಕೋಮುವಾದಿ ಬಿಜೆಪಿ ನಾಯಕರ ದುರಾಡಳಿತದಿಂದ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ.ಹತ್ಯೆಗಳ ಸರಮಾಲೆ ನಡೆದಿದೆ.ಸಾವಿನ ಮನೆಯಲ್ಲಿ ರಾಜಕೀಯಮಾಡಲು ಇವರು ಹೊರಟಿದ್ದಾರೆ ಎಂದು ಸಿದ್ದು ಗುಡುಗಿದರು.
ಬಿಜೆಪಿ ನಾಯಕರು ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ಮಾಡುತ್ತಾರೆ ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ ಅವರಲ್ಲಿ ಇಲ್ಲ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹತ್ಯೆಗಳಾಗಿವೆ ಆದರೆ ಪ್ರವೀಣ್ ಮನೆಗೆ ಮಾತ್ರ ಭೇಟಿ ನೀಡಿದರೇ ಹೊರತು ಇನ್ನಿಬ್ಬರ ಮನೆಗೆ ಹೋಗದೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ನಾನು ಎಂದೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ.ಈಗ ನನಗೆ 75 ವರ್ಷ ತುಂಬಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ ಹಾಗಾಗಿ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ.
ಇದೇ ವೇಳೆ ನನ್ನ ಆಡಳಿತಾವಧಿಯ ಕಾರ್ಯಗಳನ್ನು ಮೆಲುಕು ಹಾಕಲು ಕಾಂಗ್ರೆಸ್ ಪಕ್ಷದ ನಾಯಕರು ಈ ಅಮೃತ ಮಹೋತ್ಸವ ಏರ್ಡಿಸಿದ್ದಾರೆ ಇದು ನನ್ನ ಅದೃಷ್ಟ. ಇದಕ್ಕಾಗಿ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

