ದಾವಣಗೆರೆ: ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ವೇಳೆ, ಸಿದ್ದರಾಮಯ್ಯ ಅವರು 75ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ದೇಶಕ್ಕೂ ಸಂಭ್ರಮ, ಸಿದ್ದರಾಮಯ್ಯ ಮತ್ತು ನಮಗೂ, ನಿಮಗೂ ಸಂಭ್ರಮ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಹುಟ್ಟು ಹಬ್ಬ ಆಚರಿಸಿಕೊಂಡ ಸಿದ್ದರಾಮಯ್ಯ ಅವರನ್ನು ವೇದಿಕೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಿ, ಅವರ ಕೈ ಹಿಡಿದು ಮೇಲೆತ್ತಿ ಅಭಿನಂದಿಸಿ ಮಾತನಾಡಿದರು.
ನಿವೇಲ್ಲಾ ವಿಧಾನಸೌಧದ ಮೆಟ್ಟಿಲ ಮೇಲೆ ಓಡಾಡಬೇಕು. ಅದಕ್ಕಾಗಿ ಅಧಿಕಾರದಲ್ಲಿರುವ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಭ್ರಷ್ಟ ಸರ್ಕಾರವನ್ನು ಕಿತ್ತೊಗೆದು ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಈ ಬಗ್ಗೆ ಸಂಕಲ್ಪ ಮಾಡಬೇಕು ಎಂದು ಕಾರ್ಯಕರ್ತರಿಗೆ ಹೇಳಿ ಡಿಕೆಶಿ ಸಂಕಲ್ಪ ಕೂಡಾ ಮಾಡಿಸಿದರು.
ನಮ್ಮ ಉದ್ದೇಶ, ಪ್ರತಿಜ್ಞೆ ಅದೇ ಆಗಿರಬೇಕು ಎಂದು ಕರೆ ನೀಡಿದರು.
ನಾನು, ಸಿದ್ದರಾಮಯ್ಯ ಅವರಿಂದ ಮಾತ್ರ ಸರ್ಕಾರ ತರಲು ಸಾಧ್ಯವಿಲ್ಲ. ಕಾರ್ಯಕರ್ತರು ಮನೆ ಮನೆಗೆ ಹೋಗಿ ಜನರಿಗೆ ಬಿಜೆಪಿ ಸರ್ಕಾರದ ಭ್ರಷ್ಟಚಾರದ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರನ್ನು ಹಿಂದುಳಿದ ನಾಯಕ ಎಂದು ಸೀಮಿತ ಮಾಡಬೇಡಿ. ಅವರು ಸರ್ವ ಧರ್ಮ ಹಾಗೂ ಎಲ್ಲಾ ಜನಾಂಗದ ನಾಯಕ ಎಂದು ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಮುಂದಿನ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ. ಎಲ್ಲರೂ ಸಿದ್ದರಾಮಯ್ಯ ಅವರ ಕೈ ಬಲ ಪಡಿಸಬೇಕು ಎಂದು ತಿಳಿಸಿದರು.

