ಮೈಸೂರು: ತ್ರಿವರ್ಣ ಧ್ವಜದಲ್ಲಿ ಭಾರತದ ಏಕತೆ, ಶಕ್ತಿ, ಸ್ವಾತಂತ್ರ್ಯ, ಭವಿಷ್ಯ ಎಲ್ಲವೂ ಅಡಗಿದೆ. ಅದರ ಬಗ್ಗೆ ವಿರೋಧ ಮಾಡುವುದು, ಟೀಕೆ ಮಾಡುವುದು ದೇಶ ವಿರೋಧಿ ಕೃತ್ಯದಂತೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಅಂತಹ ಕೀಳು ಮಟ್ಟದ ಮಾತಿಗೆ ಜನತೆ ಬೆಲೆ ಕೊಡುವುದಿಲ್ಲ. ಜನ ಮತ್ತಷ್ಟು ಸ್ಪೂರ್ತಿ ಪ್ರೇರಣೆಯಿಂದ ಸ್ವಾತಂತ್ರ್ಯೋತ್ಸವ ಹಾಗೂ ತಿರಂಗ ಅಭಿಯಾನ ಆಚರಣೆ ಮಾಡುತ್ತಾರೆ ಎಂದು ಹೇಳಿದರು.
ಸ್ವಾತಂತ್ರ್ಯದ ಬಗ್ಗೆ ಕೆಲವರಿಗೆ ಇತಿಹಾಸ ಗೊತ್ತಿಲ್ಲ. ಕೆಲವರು ಅದನ್ನು ತಿರುಚುವ ಕೆಲಸ ಮಾಡುತ್ತಾ ಇದ್ದಾರೆ. ಕಾಂಗ್ರೆಸ್ ನವರು ತಿರಂಗಾ ಯಾತ್ರೆ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಹರ್ ಘರ್ ತಿರಂಗಾ ಅಭಿಯಾನವನ್ನು ಅದ್ದೂರಿಯಿಂದ ಆಚರಿಸುತ್ತೇವೆ.ಬಾವುಟದ ಬಗ್ಗೆ ಕೀಳರಿಮೆಯಿಂದ ಮಾತನಾಡಬಾರದು. ಬಾವುಟ ದೇಶವನ್ನು ಒಗ್ಗೂಡಿಸುವ ಸಂಕೇತ.
ಅದರ ಬಗ್ಗೆ ಯಾರು ಹಗರುವಾಗಿ ಮಾತನಾಡಬೇಡಿ ಎಂದು ತಾಕೀತು ಮಾಡಿದರು.
ಬಾವುಟ ಹಿಡಿದ ದೇಶ ಪ್ರಮಿಗಳನ್ನು ಯಾರೂ ಟೀಕೆ ಮಾಡಬಾರದು. ಕಾಂಗ್ರೆಸ್ ಟೀಕೆಗಳಿಗೆ ಜನರು ಕಿವಿಕೊಡುವುದಿಲ್ಲ ಎಂದು ತಿಳಿಸಿದರು.
ಮಳೆ ಹಾನಿ ಪರಿಹಾರ ಸಂಬಂಧ ಪ್ರತಿಕ್ರಿಯಿಸಿದ ಸಿಎಂ, ಮಳೆಹಾನಿಯಾಗಿರುವೆಡೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ನೀರು ನುಗ್ಗಿದ್ದಕ್ಕೆ ಹತ್ತು ಸಾವಿರ, ಪೂರ್ಣ ಮನೆ ಬಿದ್ದಿದ್ದಕ್ಕೆ ಮೊದಲ ಹಂತದಲ್ಲಿ ಪರಿಹಾರ ನೀಡುತ್ತಿದ್ದೇವೆ. ರಸ್ತೆಗಳು, ಸೇತುವೆಗಳಿಗೆ ಹಾನಿಯಾಗಿದೆ. ಅದರ ರಿಪೇರಿಗೆ ಹಣ ಬಿಡುಗಡೆಯಾಗಿದೆ. ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ವರದಿ ಬಂದ ತಕ್ಷಣ ಎಲ್ಲಾ ಪರಿಹಾರಗಳನ್ನು ನೀಡಲಾಗುವುದು ಎಂದು ತಿಳಿಸಿದರು.
75ನೇ ಸ್ವಾತಂತ್ರ್ಯೋತ್ಸವವನ್ನು ಸರ್ಕಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಆಚರಿಸಲಿದೆ ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಹೇಳೋದಕ್ಕೆ ಮೈಸೂರಿಗೆ ಬಂದಿದ್ದೇನೆ ಎಂದು ಇದೇ ವೇಳೆ ಬೊಮ್ಮಾಯಿ ತಿಳಿಸಿದರು.
ಒಮಿಕ್ರಾನ್ ರೂಪಾಂತರ ತಳಿ ವಿಚಾರಕ್ಕೆ ಪ್ರತಿಕ್ರಿಯಿಸಿ ಕೇಂದ್ರದಿಂದ ಸೂಚನೆ ಬರುವ ಮುನ್ನವೇ ನಾವು ಎಚ್ಚೆತ್ತುಕೊಂಡಿದ್ದೇವೆ. ನಿರಂತರವಾಗಿ ಅದರ ಕುರಿತು ಸಂಶೋಧನೆ ನಡೆಯುತ್ತಿದೆ ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಆತಂಕವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

