ಮತಾಂಧ ಶಕ್ತಿ ಬಗ್ಗು ಬಡಿಯಲು ಸರಕಾರ ಬದ್ಧ -ಆರಗ ಜ್ಞಾನೇಂದ್ರ

ಶಿವಮೊಗ್ಗ: ರಾಜ್ಯದ ಯಾವುದೇ ಮೂಲೆಯಲ್ಲಿ ಮತಾಂಧ ಶಕ್ತಿ ಕಂಡುಬಂದರೆ ಅದನ್ನು ಬಗ್ಗು ಬಡಿಯಲು ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,

ಇತ್ತೀಚೆಗೆ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಪ್ರವೀಷ್ ನನ್ನು ಹತ್ಯೆ ಗೈದು, ಕಣ್ಮರೆಯಾಗಿದ್ದ, ಮೂರು ಮಂದಿ ಕೊಲೆಗಡುಕರನ್ನು ಪೊಲೀಸರು ದಕ್ಷತೆಯಿಂದ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಈ ಬಂಧನದಿಂದ, ಕರಾವಳಿ ಭಾಗದಲ್ಲಿ, ಮತಾಂಧ ಶಕ್ತಿಗಳ ಕುಮ್ಮಕ್ಕಿನಿಂದ ಪ್ರೇರಿತರಾಗಿ ಕೊಲೆಗೈಯುತ್ತಿದ್ದ ದುಷ್ಕರ್ಮಿಗಳಿಗೆ, ಯಾವುದೇ ಕಾರಣಕ್ಕೂ ಕಾನೂನಿನ ಬಾಹುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಎಂಬ ಸ್ಪಷ್ಟ ಸಂದೇಶ ಸಾರಿದ್ದಾರೆ ಎಂದು ತಿಳಿಸಿದರು.

ಕೊಲೆಗಡುಕರಿಗೆ ಪ್ರೇರಣೆ ನೀಡಿದ ದುಷ್ಟರು ಹಾಗೂ ಸಮಾಜ  ವಿರೋಧಿ ಶಕ್ತಿಗಳನ್ನು, ಗುರುತಿಸಿ ಮಟ್ಟ ಹಾಕಬೇಕಾಗಿದೆ ಹಾಗೂ ಈ ಬಗ್ಗೆ ತನಿಖೆ ನಡೆಸುತ್ತಿರುವ ಎನ್ ಐ ಎ ಜತೆ ರಾಜ್ಯ ಪೊಲೀಸರು, ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರವೀಣ್ ಹತ್ಯೆ ನಂತರ ನಾನೂ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪ್ರವೀಣ್ ಕುಟುಂಬದವರನ್ನು, ಭೇಟಿಯಾದ ಸಂದರ್ಬದಲ್ಲಿ, ಪ್ರವೀಣ್ ಪೋಷಕರು, ಹಂತಕರನ್ನು ಹಿಡಿದು ತಕ್ಕ ಶಾಸ್ತಿ ನೀಡಬೇಕೆಂದು ಪ್ರಾರ್ಥಿಸಿದ್ದರು.

ಇದೀಗ ಪ್ರವೀಣ್ ಹತ್ಯೆ ಆರೋಪಿಗಳ  ಬಂಧನವಾಗಿದೆ, ಹಾಗೂ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಎಲ್ಲಾ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರವೀಣ್ ನೆಟ್ಟಾರು ನನ್ನು ಅಮಾನುಷವಾಗಿ ಹತ್ಯೆಗೈದ ಆರೋಪಿಗಳನ್ನು ಬಂಧಿಸುವ ಮೂಲಕ, ಕರ್ನಾಟಕ ಪೊಲೀಸರ ಕಾರ್ಯಕ್ಷಮತೆ ಮತೊಮ್ಮೆ ಸಾಬೀತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇತ್ತೀಚೆಗೆ ನಡೆದ ಹುಬ್ಬಳ್ಳಿ ಗಲಭೆ ಯಾಗಿರಬಹುದು, ಅಥವಾ ಶಿವಮೊಗ್ಗದ ಹರ್ಷ ಕೊಲೆ, ಬೆಂಗಳೂರಿನ ಚಂದ್ರು ಕೊಲೆ ಪ್ರಕರಣ ವಾಗಿರಬಹುದು, ಆಸಿಡ್ ಎರಚಿದ ಘಟನೆ ಯಾಗಿರಬಹುದು, ರಾಜ್ಯ ಪೊಲೀಸರು, ಅತ್ಯಂತ ದಕ್ಷತೆಯಿಂದ ಕಾರ್ಯ  ನಿರ್ವಹಿಸಿ ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ರಾಜ್ಯ ಪೊಲೀಸರನ್ನು ಅಭಿನಂದಿಸುತ್ತೇನೆ ಎಂದು ಆರಗ ಹೇಳಿದರು.